

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಪೊಲೀಸ್ ಠಾಣೆ, ವಸತಿ ಸಮುಚ್ಚಯ ಒಳಗೊಂಡಂತೆ 100 ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿಗಳು ಕಳಪೆಯಾಗಿವೆ. ಈ ಎಲ್ಲ ಕಾಮಗಾರಿಗಳ ಸಮಗ್ರ ತನಿಖೆ ಆಗಬೇಕಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಆಗ್ರಹಿಸಿದರು.
ಶಾಸಕ ಆರಗ ಜ್ಞಾನೇಂದ್ರ ಅವಧಿಯಲ್ಲಿ ಪೊಲೀಸ್ ಠಾಣೆ, ಪೊಲೀಸ್ ಕ್ವಾರ್ಟರ್ಸ್, ವಸತಿ ಸಮುಚ್ಚಯ, ಅಗ್ನಿಶಾಮಕ ದಳದ ಕಟ್ಟಡ, ಗ್ರಾಮೀಣಾಭಿವೃದ್ಧಿ ಕಟ್ಟಡ, ಪ್ರಥಮದರ್ಜೆ ಕಾಲೇಜು ಮತ್ತಿತರ ಕಾಮಗಾರಿಗಳು ನಡೆದಿವೆ. ಕಟ್ಟಡಗಳು ಕಳಪೆ ಆಗಿರುವುದರಿಂದ ಅಲ್ಪ ಮಳೆಗೂ ಸೋರುತ್ತಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎಲ್ಲ ಕಾಮಗಾರಿಗಳನ್ನೂ ಶಾಸಕರ ಸಂಬಂಧಿಯೇ ಗುತ್ತಿಗೆ ಪಡೆದಿದ್ದಾರೆ. ಇದರಲ್ಲಿ ಆರಗ ಜ್ಞಾನೇಂದ್ರ ಅವರ ಪಾಲು ಸಹ ಇದೆ ಎಂಬ ಅನುಮಾನವಿದೆ. ಮಲೆನಾಡಿನಲ್ಲಿ ಕಟ್ಟಡಗಳು ಸೋರಿಕೆ ಆಗುವುದು ಸಾಮಾನ್ಯ ಎಂದಾದರೆ ಶಾಸಕರು, ಗುತ್ತಿಗೆದಾರರ ಮನೆಗಳು ಏಕೆ ಸೋರುತ್ತಿಲ್ಲ. ಸರ್ಕಾರಿ ಕಟ್ಟಡಗಳು ಮಾತ್ರವೇ ಏಕೆ ಸೋರುತ್ತವೆ ಪ್ರಶ್ನಿಸಿದರು. ಇದರಲ್ಲಿ ಅವರ ಪಾತ್ರ ಇಲ್ಲವಾದರೆ ಸದನದಲ್ಲಿ ಜ್ಞಾನೇಂದ್ರ ಅವರೇ ಈ ವಿಚಾರವನ್ನು ಪ್ರಸ್ತಾಪಿಸಬೇಕು. ಇಲ್ಲವಾದಲ್ಲಿ ಅವರದೂ ಪಾಲಿದೆ ಎಂಬುದು ಸ್ಪಷ್ಟವಾಗಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಚ್.ಚಂದ್ರಭೂಪಾಲ್, ತಾಲೂಕು ಅಧ್ಯಕ್ಷ ಮಧು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಧೀರರಾಜ್ ಹೊನ್ನವಿಲೆ, ಎಸ್.ಪಿ.ಪಾಟೀಲ್, ಕೃಷ್ಣ, ಹಿರಣ್ಣಯ್ಯ ಸುದ್ದಿಗೋಷ್ಠಿಯಲ್ಲಿದ್ದರು.
ಸಚಿವರೆದುರು ಬೇಡಿಕೊಂಡ ಜ್ಞಾನೇಂದ್ರ
ಗೃಹ ಸಚಿವರು ಶನಿವಾರ ಕಟ್ಟಡಗಳನ್ನು ಉದ್ಘಾಟಿಸಬೇಕಿತ್ತು. ಹವಾಮಾನ ವೈಪರೀತ್ಯದಿಂದ ಅವರು ಬೆಂಗಳೂರಿಗೆ ವಾಪಸಾದರು. ಆದರೆ ಆತಂಕದಿಂದ ಜ್ಞಾನೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ನೀವಾದರೂ ಬಂದು ಉದ್ಘಾಟಿಸಿ ಎಂದು ಹತ್ತಾರು ಬಾರಿ ಕರೆ ಮಾಡಿದ್ದರು. ಅಲ್ಲದೇ ಕೋಣಂದೂರಿನಿಂದ ತೀರ್ಥಹಳ್ಳಿವರೆಗೆ ಸಚಿವರ ಕಾರಿನಲ್ಲೇ ಪ್ರಯಾಣಿಸಿ ಕಟ್ಟಡಗಳು ಸ್ವಲ್ಪ ಸೋರುತ್ತಿದ್ದು ದೊಡ್ಡದು ಮಾಡಬೇಡಿ ಎಂದು ಬೇಡಿಕೊಂಡರು. ಮುಲಾಜಿಗೆ ಒಳಗಾದ ಸಚಿವರು ಮಲೆನಾಡಿನಲ್ಲಿ ಮಳೆಗಾಲದಲ್ಲಿ ಮನೆಗಳು ಸೋರುವುದು ಸಾಮಾನ್ಯ ಎಂದು ತೀರ್ಥಹಳ್ಳಿಯ ಸಾರ್ವಜನಿಕ ಸಮಾರಂಭದಲ್ಲಿ ಹೇಳಿಕೆ ನೀಡಿದ್ದರು. ಇಂತಹ ದುಸ್ಥಿತಿ ಜ್ಞಾನೇಂದ್ರ ಅವರಿಗೆ ಬರಬಾರದಿತ್ತು ಎಂದು ಆಯನೂರು ಲೇವಡಿ ಮಾಡಿದರು.