ಕವಿತೆಯಲ್ಲಿ ಅರ್ಥ ಕೊಡುವ ಸಾಲುಗಳೇ ಮುಕ್ತಕ

mysore
Published on

ಮೈಸೂರು: ಯುಗಾದಿ ಹಬ್ಬದ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ನಂಜನಗೂಡು ಸತ್ಯನಾರಾಯಣ ಅವರ ‘ಮುಕ್ತಕ ಮಂಥನ’ ಮುಕ್ತಕಾಭಿನಂದನಾ ಕೃತಿ ಬಿಡುಗಡೆ ಮಾಡಲಾಯಿತು.


ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಕವಿತೆಗಳಲ್ಲಿ ಹೆಚ್ಚು ಅರ್ಥವನ್ನು ಕೊಡುವ ಕೊನೆಯ ಎರಡು ಸಾಲುಗಳೇ ಮುಕ್ತಕ. ಸ್ವಾತಂತ್ರೃವಾದ ಸಂಸ್ಕೃತಿಯನ್ನು ಮುಕ್ತಕ ಒಳಗೊಂಡಿದ್ದು, ಸಾಹಿತ್ಯವನ್ನು ಪ್ರೋತ್ಸಾಹಿಸುತ್ತದೆ ಎಂದರು.


ಮುಕ್ತಕ ಎಂಬುದು ಕಡಿಮೆ ಶಬ್ದಗಳಿಂದ ಕಟ್ಟುವಂತಹದ್ದು, ಕನ್ನಡ ಪ್ರಾಚೀನ ಕಾಲದಿಂದಲೂ ಮುಕ್ತಕವು ತನ್ನ ಪರಂಪರೆಯನ್ನು ಹೊಂದಿದೆ. ಮುಕ್ತ ಎಂದರೆ ವಿಶಾಲ ಎಂಬ ಅರ್ಥವನ್ನು ನೀಡುತ್ತದೆ. ಆದರೆ, ಮುಕ್ತಕ ಎಂಬುದು ಕಡಿಮೆ ಪದಗಳಿಂದ ವಿಶಾಲ ಅರ್ಥವನ್ನು ನೀಡುತ್ತದೆ ಎಂದರು.
ಮುಕ್ತಕ ಆಕಾರದಲ್ಲಿ ಅತ್ಯಂತ ಸಣ್ಣದಾದ, ಒಂದೇ ಒಂದು ಭಾವವನ್ನು ಅರ್ಥಗಭಿರ್ತವಾಗಿ ಅಭಿವ್ಯಕ್ತಿಸುವ ಒಂದು ಬಿಡಿ ಪದ್ಯ. ಭಾವಕ್ಕೆ ಸೂಕ್ತ ಭಾಷೆಯಲ್ಲಿ ಅಭಿವ್ಯಕ್ತಗೊಂಡು ಮಿಂಚಿನಂತೆ ಕೋರೈಸುವ ಗುಣವುಳ್ಳದ್ದು. ಕಾವ್ಯ ಪ್ರಕಾರಗಳಲ್ಲಿಯೇ ಮುಕ್ತಕ ಅತ್ಯಂತ ಸಣ್ಣದಾದದ್ದೂ ಸುಂದರವಾದದ್ದೂ ಹೌದು ಎಂದರು.


ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ವಿ.ವಸಂತಕುಮಾರ್, ಕವಿ ಜಯಪ್ಪ ಹೊನ್ನಾಳಿ, ಸಮಾಜ ಸೇವಕ ರಘುರಾಮ್ ವಾಜಪೇಯಿ, ರಾಜ್ಯ ಮುಕ್ತಕ ಕವಿ ಪರಿಷತ್ ಅಧ್ಯಕ್ಷ ಎಂ.ಮುತ್ತುಸ್ವಾಮಿ, ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಕೃತಿಕಾರ ನಂಜನಗೂಡು ಸತ್ಯನಾರಾಯಣ, ಕಸಾಪದ ಪದಾಧಿಕಾರಿಗಳಾದ ಮ.ನ. ಲತಾ ಮೋಹನ್, ಜಿ.ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net