ಕೆರೆಯಲ್ಲಿ ಮಣ್ಣು ಮಾಫಿಯಾ ಅವ್ಯಾಹತ

narsapura
Published on

ನರಸಾಪುರ: ಚೌಡದೇನಹಳ್ಳಿಯ ಕೆರೆಯನ್ನು ಸಮತಟ್ಟು ಮಾಡಲು ಸ್ಥಳಿಯ ಗ್ರಾಪಂನಿಂದ ಷರತ್ತು ಬದ್ಧವಾಗಿ 120 ಟ್ರ್ಯಾಕ್ಟರ್​ ಲೋಡ್​ ಎತ್ತುವುದಾಗಿ ಗುತ್ತಿಗೆ ಪಡೆದು, ಅನಂತರ ಲೆಕ್ಕಕ್ಕೇ ಇಲ್ಲದಷ್ಟು ಮಣ್ಣನ್ನು ಟಿಪ್ಪರ್​ ಮೂಲಕ ಸಾಗಣೆ ಮಾಡಿದ್ದು, ಮಣ್ಣು ಮಾಫಿಯಾಗೆ ಬಲಿಯಾದ ಭೂಮಿಯಲ್ಲಿ ಬೃಹತ್​ ಆಳದ ತಗ್ಗುಗಳು ಬಿದ್ದಿದ್ದು, ಸೂಕ್ತ ತನಿಖೆಯಾಗಬೇಕು ಎಂದು ರೈತ ಸಂದ ಯುವಟಕದ ಅಧ್ಯಕ್ಷ

ರಾಮ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೌಡದೇನಹಳ್ಳಿ ಕೆರೆಯ ಮಣ್ಣಿಗಾಗಿ ಗ್ರಾಪಂನಿಂದ ಅನುಮತಿ ಪಡೆದಿದ್ದಾರೆ. ಆದರೇ ಷರತ್ತುಗಳನ್ನು ಗಾಳಿಗೆ ತೂರಿ ಟಿಪ್ಪರ್​ ಮೂಲಕ ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿರುವುದು ಖಂಡನೀಯ. ಸುಮಾರು 15ರಿಂದ 20ಲಕ್ಷ ಬೆಲೆ ಬಾಳುವ ಮಣ್ಣಿಗೆ ಕೇವಲ 12 ಸಾವಿರ ರೂ.ಗಳಿಗೆ ಮಾರಾಟ ಮಾಡಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ನಾಮ್​ಕೇವಾಸ್ತೆಗೆ ಹಣ ಕಟ್ಟಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಜತೆಗೆ ಈ ಜಾಗಗಳನ್ನು ಲೇಔಟ್​ ಆಗಿ ಬದಲಾಯಿಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಲು ಈ ರೀತಿ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣಿನ ಮಾಫಿಯಾ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಮೂಲ ರೈತರು ಕೆರೆಯಲ್ಲಿ ಮಣ್ಣು ತೆಗೆಯಬೇಕೆಂದರೆ ನೂರಾರು ಕಾನೂನುಗಳು ಸೃಷ್ಟಿಯಾಗುತ್ತವೆ. ಆದರೆ ಪ್ರಭಾವಿ ವ್ಯಕ್ತಿಗಳು ಮಣ್ಣು ತೆಗೆಯಬೇಕೆಂದರೆ ದಿಢೀರನೆ ಅನುಮತಿಗಳು ದೊರೆಯುವುದು ನಾಟಕೀಯ ಬೆಳವಣಿಗೆಯಾಗಿದೆ. ಖಾಸಗಿ ವ್ಯಕ್ತಿಗಳು ಕೆರೆಯಲ್ಲಿನ ಅಪಾರ ಮಣ್ಣು ತೆಗೆದು, ಕೆರೆ ಸ್ವರೂಪವನ್ನೇ ಹಾಳು ಮಾಡಿದ್ದು, ಮಣ್ಣು ತೆಗೆಯುತ್ತಿರುವ ಬಗ್ಗೆ ಇಲ್ಲಿನ ಪಿಡಿಒಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜವಿಲ್ಲದಂತಾಗಿದೆ.

ಈ ಕೂಡಲೇ ಕೆರೆ ಬಳಿ ಗ್ರಾಪಂ ಅನುಮತಿ ಬಗ್ಗೆ ನಾಮಫಲಕ ಅಳವಡಿಸಬೇಕು. ಮಣ್ಣಿಗಾಗಿ ಕೆರೆಯನ್ನು ಮನಬಂದಂತೆ ಅಗೆದಿರುವ ಹಿನ್ನೆಲೆಯಲ್ಲಿ ಬೃಹತ್​ ಹಳ್ಳಗಳು ನಿಮಾರ್ಣವಾಗಿ, ಕೆರೆಯ ಮೂಲ ಸ್ವರೂಪವನ್ನೇ

ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

"ಗ್ರಾಪಂನಿಂದ ಫೆ.14ರಿಂದ ಫೆ.20 ರ ವರೆಗೆ ಷರತ್ತುಗಳ ಅನ್ವಯ ಮಣ್ಣು ತೆಗೆಯಲು ಅನುಮತಿ ನೀಡಿದ್ದೆವೆ. ಜತೆಗೆ ನಾವು ನೀಡಿದ್ದ ಸಮಯ ಮೀರಿ ಮತ್ತಷ್ಟು ಮಣ್ಣು ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಅವರಿಂದ ಗ್ರಾಪಂಗೆ ಹೆಚ್ಚಿನ ಹಣ ಕಟ್ಟಿಸಿಕೊಂಡಿದ್ದೆವೆ. ಆದರೂ ಸಹ ಅವರು ಮತ್ತೆ ರಾತ್ರೋರಾತ್ರಿ ಮಣ್ಣು ತೆಗೆಯುತ್ತಿರುವ ಬಗ್ಗೆ ರೈತ ಮುಖಂಡರು ಹಾಗೂ ಸಾರ್ವಜನಿಕರು ದೂರು ನೀಡಿದ ಮೇರೆಗೆ ಸ್ಥಳ ಪರಿಶೀಲಿಸಿದಾಗ ಈ ಸತ್ಯತೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಮಾಲೀಕರಿಗೆ ನೋಟಿಸ್​ ಜಾರಿ ಮಾಡಿ ಕ್ರಮ ಕೈಗೊಳ್ಳುತ್ತವೆ."

> ವತ್ಸಲಾ ಪಿಡಿಒ

ಕೆರೆ ಪರಿಶೀಲನೆ

ಚೌಡದೇನಹಳ್ಳಿ ಕೆರೆಯಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಮಣ್ಣು ಸಾಗಸಲಾಗುತ್ತಿದೆ. ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಮೌನವಹಿಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ ಹಿನ್ನಲೆಯಲ್ಲಿ ಪಿಡಿಒ ವತ್ಸಲಾ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಪಂ ಸಿಇಒ ಕ್ರಮ ಕೈಗೊಳ್ಳಲಿ; ಜಿಪಂ ಸಿಇಒ ಚೌಡದೇನಹಳ್ಳಿ ಕೆರೆ ಪರಿಶೀಲಿಸಿ, ಕೆರೆಯ ಮಣ್ಣನ್ನು ಅಕ್ರಮವಾಗಿ ಅತೀ ಕಡಿಮೆ ಬೆಲೆಗೆ ಮಾರಾಟಕ್ಕೆ ಇಟ್ಟಿರುವ ಪಿಡಿಒ ವಿರುದ್ಧ ಮತ್ತು ಜಮೀನು ಮಾಲೀಕರು ಮತ್ತು ರಾತ್ರಿಯ ವೇಳೆ ಮಣ್ಣು ಸಾಗಿಸಲು ಬಂದ ಟಿಪ್ಪರ್​ ಲಾರಿ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮಕೈಗೊಂಡು, ವಾಹನಗಳನ್ನು ಜಪ್ತಿ ಮಾಡಬೇಕು ಇಲ್ಲವಾದರೆ ಗ್ರಾಪಂ ಎದುರು ಪ್ರತಿಭಟಿಸಲಾಗುವುದು ಎಂದು ರೈತ ಸಂಘದ ರಾಜ್ಯ ಯುವ ಘಟಕ ಅಧ್ಯಕ್ಷ ರಾಮುಶಿವಣ್ಣ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net