ಮೃತ್ಯುಂಜಯ ಮಂತ್ರಕ್ಕಿದೆ ಸಾವು ಗೆಲ್ಲುವ ಶಕ್ತಿ

SANSHI SANMAN
Published on

ಸಂಶಿ: ಪೂಜೆ, ಪುನಸ್ಕಾರ ವಿರಳ ಎನ್ನುವ ದಿನಮಾನಗಳಲ್ಲಿ ಒಂಬತ್ತು ದಿನಗಳ ಕಾಲ ಗುರುಗಳ ಸಾನ್ನಿಧ್ಯದಲ್ಲಿ ಜಪ, ತಪ, ಹೋಮ ನಡೆಸುವ ಮೂಲಕ ಭಕ್ತಿಯ ಶಕ್ತಿ ಅನಾವರಣಗೊಳಿಸಿದ್ದು ಸಂತಸ ತಂದಿದೆ ಎಂದು ಕಲಾದಗಿ ಪಂಚಗ್ರಹ ಹಿರೇಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಯರೇಬೂದಿಹಾಳ ಗ್ರಾಮದಲ್ಲಿ ಒಂಬತ್ತು ದಿನಗಳ ಕಾಲದ ಜರುಗಿದ ‘ಮೃತ್ಯುಂಜಯ ಜಪ, ತಪ, ದುರ್ಗಾಶಕ್ತಿ ನವ ಮಂತ್ರ ಜಪ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ‘ಬದುಕು ಸಾರ್ಥಕವಾಗಬೇಕಾದರೆ ಗುರು ದರ್ಶನವಾಗಬೇಕು. ಸಾವನ್ನು ಗೆಲ್ಲುವ ಶಕ್ತಿ, ಮೃತ್ಯುಂಜಯ ಮಂತ್ರ, ದುರ್ಗಾ ಜಪಮಣಿ ಶಕ್ತಿಗಿದೆ ಎಂದರು.

ರಾಣೆಬೆನ್ನೂರ- ಮದ್ದರಕಿ ಶ್ರೀ ಶನೈಶ್ಚರ ಹಿರೇಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಗುರು, ಲಿಂಗ, ಜಂಗಮರ ಮೇಲೆ ಪ್ರೀತಿ ಇರಬೇಕು. ಸಾವನ್ನು ಗೆಲ್ಲುವ ಮೃತ್ಯುಂಜಯ ಜಪವು ಸಾಯುವಂತವರನ್ನು ಬದುಕಿಸುವ ಸಂಜೀವಿನಿಯಾಗಿದೆ ಎಂಬುದಕ್ಕೆ ಇಂಥ ಪೂಜೆಯ ಫಲವೇ ಸಾಕ್ಷಿಯಾಗಿದೆ. ಅಪಮೃತ್ಯು ದೋಷ ಪರಿಹಾರಕ್ಕಾಗಿ ಗುರುಗಳಿಂದ ಮೃತ್ಯುಂಜಯ ಜಪ ಮಾಡಿಸುವ ಸಂಪ್ರದಾಯವೂ ಆಗಮ ಶಾಸ್ತ್ರದಲ್ಲಿದೆ ಎಂದು ತಿಳಿಸಿದರು.

ಅಡ್ನೂರ ಶ್ರೀಮಠದ ಸ್ವಾಮೀಜಿ ಮಾತನಾಡಿ, ಪುಣ್ಯದ ಬುತ್ತಿ ಇದ್ದರೆ ಎಲ್ಲಿಯಾದರೂ ಬಿಚ್ಚಿ ಉಣ್ಣಬಹುದು. ಇರದೇ ಇದ್ದರೆ ಇದು ಅಸಾಧ್ಯ. ಗುರು ವಾಕ್ಯ ಪಾಲನೆ ಮಾಡುವುದರಿಂದ ಪೂಜಾಫಲ ದೊರೆಯುತ್ತದೆ ಎಂದರು.

ಕಲಾದಗಿ, ಆಡೂರ, ಚಿಮ್ಮಲಗಿ, ನಾಗವಂದ, ಕೊಣ್ಣೂರಿನ ಗುರುವಾಡ ಶ್ರೀಗಳಿಗೆ ಮಹದೇವಪ್ಪ ಪೂಜಾರ ಕುಟುಂಬಸ್ಥರು ಗುರುಕಾಣಿಕೆ ಸಲ್ಲಿಸಿ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net