ಎಂ.ಜೆ.ಕಿರಣಗೌಡ ಸಾರಥ್ಯದಲ್ಲಿ ನೆಡದ ‘ಮಿಸ್ಟರ್ ಮೋದಿ ಕಪ್-2025’ ಅಂತರ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಿರೀಕ್ಷೆಗೂ ಮೀರಿದ ಯಶಸ್ಸು

1
Published on

ಮೈಸೂರು: ನರೇಂದ್ರ ಮೋದಿ ಪ್ರಧಾನಿಯಾಗಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ದೇಹದಾರ್ಢ್ಯ ಮತ್ತು ಫಿಟ್ನೆಸ್ ಸಂಸ್ಥೆ, ರಾಕ್ ಜಿಮ್ ಮತ್ತು ಅರ್ನಾಲ್ಡ್ ಜಿಮ್ ವತಿಯಿಂದ ಮೈಸೂರು ನಗರ ಯುವ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಎಂ.ಜೆ.ಕಿರಣಗೌಡ ಸಾರಥ್ಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮಿಸ್ಟರ್ ಮೋದಿ ಕಪ್-2025’ ಅಂತರ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆಯಿತು.

ಹೆಬ್ಬಾಳದ ಯಜಮಾನ ಸರ್ಕಾಲ್‌ನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಆಗಮಿಸಿದ್ದ 250ಕ್ಕೂ ಸ್ಪರ್ಧಿಗಳು ಭಾಗವಹಿ ತಮ್ಮ ಕಟ್ಟುಮಸ್ತ್ ದೇಹವನ್ನು ಪ್ರದರ್ಶಿಸಿದರು.

ಎತ್ತರ ಆಧಾರದಲ್ಲಿ ಒಟ್ಟು 4 ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಶಾರ್ಟ್ ಕ್ಲಾಸ್ 165 ಸೆಂ.ಮೀ. ಒಳಗಿನ ವಿಭಾಗ, ಮೀಡಿಯಂ ಕ್ಲಾಸ್ 170 ಸೆಂ.ಮೀ.ಒಳಗೆ, ಟಾಲ್ ಕ್ಲಾಸ್ 175 ಸೆಂ.ಮೀ.ಒಳಗೆ ಹಾಗೂ ಸೂಪರ್ ಟಾಲ್ 175 ಸೆ.ಮೀ. ಮೇಲ್ಪಟ ವಿಭಾಗಗಳಲ್ಲಿ ಸ್ಪರ್ಧೆ ನೆರವೇರಿತು.

ಮಂಡ್ಯದ ಪ್ರಮೋದ್ ‘ಮಿಸ್ಟರ್ ಮೋದಿ ಕಪ್-2025’ ಟೈಟಲ್ ಗೆಲ್ಲುವ ಮೂಲಕ 20 ಸಾವಿರ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು. ಮೈಸೂರಿನ ಚಂದನ್ ಮೋಸ್ಟ್ ಮಸ್ಕುೃಲರ್ ಪ್ರಶಸ್ತಿ ಪಡೆಯುವ ಮೂಲಕ 15 ಸಾವಿರ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು. ಜತೆಗೆ ಮೈಸೂರಿನ ಮತ್ತೊಬ್ಬ ಬಾಡಿ ಬಿಲ್ಡರ್ ಸತೀಶ್ ಅವರು ಬೆಸ್ಟ್ ಪೋಜರ್ ಪ್ರಶಸ್ತಿ ಪಡೆಯುವ ಮೂಲಕ 10 ಸಾವಿರ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡರು.

ಉಳಿದಂತೆ ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ 5 ಸಾವಿರ ರೂ.ನಗದು, ಎರಡನೇ ಬಹುಮಾನ 4 ಸಾವಿರ ರೂ., 3ನೇ ಬಹುಮಾನ 3 ಸಾವಿರ ರೂ., 4ನೇ ಬಹುಮಾನ 2 ಸಾವಿರ ರೂ.ಹಾಗೂ 5ನೇ ಬಹುಮಾನ ಪಡೆದವರಿಗೆ 1 ಸಾವಿರ ರೂ.ನಗದು ಮತ್ತು ಪ್ರಮಾಣ ಪತ್ರ ನೀಡಲಾಯಿತು.

ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ಆಟೋ ಚಾಲಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕಿರಣ್‌ಗೌಡ ಅವರು ಅದ್ಭುತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಯುವಕರಿಗೆ ದೇಹವನ್ನು ಚೆನ್ನಾಗಿ ಹಾಗೂ ಆರೋಗ್ಯಕರವಾಗಿ ಇಟ್ಟುಕೊಳ್ಳುವುದಕ್ಕೆ ಜಿಮ್ ಅತ್ಯವಶ್ಯಕ. ಹಾಗಾಗಿ ಯುವಕರಿಗೆ ಈ ಕಾರ್ಯಕ್ರಮ ಮಾದರಿಯಾಗಲಿ. ಇಂತಹ ಕಾರ್ಯಕ್ರಮ ಹೆಚ್ಚು ನಡೆಯಬೇಕು ಎಂದರು.

ಮಾಜಿ ಸಂಸದ ಪ್ರತಾಪ್‌ಸಿಂಹ ಮಾತನಾಡಿದರು. ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಲ್.ನಾಗೇಂದ್ರ, ಆಯೋಜಕ ಎಂ.ಜೆ.ಕಿರಣಗೌಡ, ಮುಖಂಡರಾದ ಮೈ.ವಿ.ರವಿಶಂಕರ್, ಶಿವಕುಮಾರ್, ರಾಕೇಶ್ ಗೌಡ, ದಿನೇಶ್ ಗೌಡ, ಆದರ್ಶ್, ಹರೀಶ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net