

ಹುಬ್ಬಳ್ಳಿ: ಯುವ ನಟ ಸಮರ್ಜಿತ್ ಹಾಗೂ ನಾಯಕಿ ಸಾನ್ಯ ಅಯ್ಯರ್ ಅಭಿನಯದ ಗೌರಿ ಸಿನಿಮಾ ರಾಜ್ಯಾದ್ಯಂತ ಜುಲೈನಲ್ಲಿ ತೆರೆ ಕಾಣಲಿದೆ. ಸಹೋದರಿ ಗೌರಿ ಸ್ಮರಣಾರ್ಥ ಈ ಸಿನಿಮಾಕ್ಕೆ ‘ಗೌರಿ’ ಟೈಟಲ್ ಇಡಲಾಗಿದೆ ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪುತ್ರ ಸಮರ್ಜಿತ್ ಹಾಗೂ ಸಾನ್ಯ ಅಯ್ಯರ್‌ಗೆ ಇದು ಚೊಚ್ಚಲ ಸಿನಿಮಾ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಸಿದ್ದಾಂತ ಇದರಲ್ಲಿಲ್ಲ. ಇದು ಗೌರಿಯ ಕಥೆಯೂ ಅಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಕ್ಕೆ ಹೆಸರು ಇಟ್ಟಿದ್ದೇನೆ ಎಂದರು.
ಚಿತ್ರದಲ್ಲಿ ಲೂಸ್‌ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ ಸೇರಿ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ ಎಂದರು.
ನಟ ಸಮರ್ಜಿತ್ ಲಂಕೇಶ ಮಾತನಾಡಿ, ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಗೌರಿ ಹೆಸರಿದ್ದರೂ ಕಥಾ ಹಂದರ ವಿಶಿಷ್ಟವಾಗಿದೆ. ತೆರೆಯ ಮೇಲೆ ಇದನ್ನು ನೋಡಿ ಆನಂದಿಸಬೇಕು ಎಂದರು. ನಟಿ ಸಾನ್ಯ ಅಯ್ಯರ್ ಮಾತನಾಡಿ, ಸಮರ್ಜಿತ್ ಅದ್ಭುತವಾಗಿ ನಟನೆ ಮಾಡಿದ್ದಾರೆ. ನನಗೂ ಈ ಸಿನಿಮಾದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ ಎಂದರು.
ಇದಕ್ಕಿಂತ ಮೊದಲು ಸಿನಿಮಾ ಹಾಡು ಹಾಗೂ ಟೀಸರ್ ಬಿಡುಗಡೆ ಮಾಡಲಾಯಿತು.
ಪತ್ರಕರ್ತರ ಮೇಲೆ ಹಲ್ಲೆ ಸಲ್ಲ: ರೇಣುಕಸ್ವಾಮಿ ಪ್ರಕರಣ ಹೊರಗಡೆ ಬಂದಿದ್ದೇ ಪತ್ರಕರ್ತರಿಂದ. ಮಾಧ್ಯಮದವರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ ಹೇಳಿದರು.
ಪತ್ರಕರ್ತರು ಇಲ್ಲದೇ ಹೋಗಿದ್ದರೆ ಈ ಪ್ರಕರಣ ಕಸದ ಬುಟ್ಟಿಗೆ ಸೇರುತ್ತಿತ್ತು. ರಾಜ್ಯ ಸರ್ಕಾರ ಪತ್ರಕರ್ತರಿಗೆ ಸಂರಕ್ಷಣೆ ಕೊಡಬೇಕು. ಸೈಬರ್ ಠಾಣೆಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಆಗ್ರಹಿಸಿದರು.
ನಟ ಆಗಲಿ ರಾಜಕಾರಣಿ ಆಗಲಿ ರಾಜ ಮರ್ಯಾದೆ ಕೊಡಬಾರದು. ರೇಣುಕಸ್ವಾಮಿ ಪತ್ನಿ ಮೂರು ತಿಂಗಳು ಗರ್ಭಿಣಿ. ಕೊಲೆ ಪ್ರಕರಣವನ್ನು ಇಡೀ ಚಿತ್ರರಂಗ ಖಂಡಿಸಬೇಕು. ಯಾರೇ ಕೊಲೆ ಮಾಡಿರಲಿ ಅವರಿಗೆ ದೊಡ್ಡ ಶಿಕ್ಷೆ ಆಗಬೇಕು. ನಾನು ಚಿತ್ರರಂಗದ ಧ್ವನಿಯಾಗಿ ಹೇಳುತ್ತಿದ್ದೇನೆ ಎಂದರು.
ನನ್ನ ಸಹೋದರಿ ಗೌರಿ ಅವರನ್ನು ಕಳೆದುಕೊಂಡರೂ ನನಗೆ ನ್ಯಾಯ ಸಿಕ್ಕಿಲ್ಲ. ರೇಣುಕಸ್ವಾಮಿ ಕೊಲೆ ಖಂಡನೀಯ. ಸರ್ಕಾರ ಅವರಿಗೆ ನ್ಯಾಯ ಕೊಡಬೇಕು. ಯಾರು ಕೊಲೆ ಮಾಡಿದ್ದಾರೆ ಎನ್ನುವುದನ್ನು ಪೊಲೀಸ್ ಆಯುಕ್ತರು ಹೇಳಿದ ಕೂಡಲೇ ಪ್ರತಿಭಟನೆ ಮಾಡೋಣ. ನಾನು ಕೂಡ ಪ್ರತಿಭಟನೆ ಮಾಡುತ್ತೇನೆ ಎಂದರು.