ವಿಶ್ವ ವಿದ್ಯಾಲಯ ಮುಚ್ಚುವ ಕ್ರಮ ಖಂಡನೀಯ; ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ

ABVP PRESS MEET UNIVERCITY CLOSE ISSU
ವಿಜಯಪುರ ನಗರದ ಎಬಿವಿಪಿ ಕಾರ್ಯಾಲಯದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಸುದ್ದಿಗೋಷ್ಠಿ ನಡೆಸಿದರು. ಸಂದೀಪ ಅರಳಗುಂಡಿ, ಸಹ ಕಾರ್ಯದರ್ಶಿ ಸ್ನೇಹಾ ಹಿರೇಮಠ ಇದ್ದಾರೆ.
Published on

ವಿಜಯಪುರ: ರಾಜ್ಯದ ಒಂಬತ್ತು ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.

ಶಿಕ್ಷಣ ಎನ್ನುವುದು ಹೊರೆಯಲ್ಲ ಅದು ಸರ್ಕಾರಗಳ ಜವಾಬ್ದಾರಿ. ಸರ್ಕಾರಗಳು ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಪರಿಹಾರದ ಬಗ್ಗೆ ಮಾತನಾಡಬೇಕು. ಈ ವರ್ಷದ ಬಜೆಟ್‌ನಲ್ಲಿ ಸರ್ಕಾರ ಹೊಸ ವಿಶ್ವ ವಿದ್ಯಾಲಯಗಳಿಗೆ ಅನುದಾನ ನೀಡಬೇಕು. ಬದಲಾಗಿ ಮುಚ್ಚುವ ನಿರ್ಧಾರ ಕೈಬಿಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ರಾಜ್ಯದ ಸಚಿವರು ಶಾಸಕರು ವಿವಿಗಳಿಂದ ಲಾಭವಿಲ್ಲ ಎನ್ನುವ ರೀತಿ ಮಾತನಾಡುತ್ತಾರೆ. ಆದರೆ ವಿಶ್ವ ವಿದ್ಯಾಲಯಗಳು ಲಾಭಾಂಶವನ್ನು ನೀಡುವ ಕಾರ್ಖಾನೆಗಳಲ್ಲ; ಶಿಕ್ಷಣ ನೀಡುವ ಸೇವಾ ಕೇಂದ್ರಗಳು. ಶಿಕ್ಷಣದ ಮೂಲಭೂತ ಆಶಯಕ್ಕೆ ಹಿನ್ನಡೆ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದರು.

ಕರ್ನಾಟಕ ರಾಜ್ಯ ಗುಣಮಟ್ಟದ ವಿಶ್ವ ವಿದ್ಯಾಲಯಗಳನ್ನು ಹೊಂದಿರುವ ರಾಜ್ಯ, ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವ ಕಾರಣಕ್ಕೆ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಉನ್ನತ ಶಿಕ್ಷಣವನ್ನ ಪಡೆಯಲು ಬರುತ್ತಾರೆ. ಆದರೆ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯ ಸಭೆಯಲ್ಲಿ ರಾಜ್ಯದ 9 ವಿಶ್ವ ವಿದ್ಯಾಲಯಗಳನ್ನು ಆರ್ಥಿಕ ಕಾರಣ ಹಾಗೂ ಇನ್ನಿತರ ಮೂಲ ಸೌಲಭ್ಯಗಳ ಕೊರತೆಯ ಕಾರಣ ಕೊಟ್ಟು ವಿವಿಗಳನ್ನೂ ಮುಚ್ಚಲು ನಿರ್ಧರಿಸಿರುವ ಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅವರ ಹತ್ತಿರದ ಸ್ಥಳಗಳಲ್ಲಿ ಸಿಗಬೇಕೆಂಬುವುದು ವಿಶ್ವವಿದ್ಯಾಲಯಗಳ ಸ್ಥಾಪನೆಯ ಮೂಲ ಉದ್ದೇಶ. ಸ್ಥಾಪನೆಯಾಗಿರುವ ಹೊಸ ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದಿಷ್ಟು ಸಮಸ್ಯೆಗಳು ಇರುವುದು ನಿಜ. ಆ ಕೊರತೆಯನ್ನು ನೀಗಿಸಬೇಕಾದದ್ದು ಸರ್ಕಾರಗಳ ಮೂಲ ಆದ್ಯತೆ ಆಗಬೇಕು, ಹೊರತು ವಿವಿಗಳನ್ನು ಮುಚ್ಚುವುದು ಪರಿಹಾರವಲ್ಲ ಎಂದರು.

ಸಾಮಾನ್ಯವಾಗಿ 10,000 ವಿದ್ಯಾರ್ಥಿಗಳಿಗೆ ಒಂದು ವಿಶ್ವ ವಿದ್ಯಾಲಯ ಇರಬೇಕೆಂಬುವುದು ಆದರ್ಶವಾದ ವಿಚಾರವಾಗಿದೆ. ಆದರೆ ನಮ್ಮಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಈಗಿರುವ ವಿಶ್ವ ವಿದ್ಯಾಲಯಗಳ ಸಂಖ್ಯೆ ಕಡಿಮೆ ಇದೆ. ಯಾವುದೇ ಸರ್ಕಾರಗಳು ಘೋಷಣೆ ಮಾಡಿದ ವಿಶ್ವ ವಿದ್ಯಾಲಯಗಳನ್ನು ಅಭಿವೃದ್ಧಿಪಡಿಸಬೇಕೆ ಹೊರತು ಅತಂತ್ರಗೊಳಿಸಬಾರದು, ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ರಾಜ್ಯ ಸರ್ಕಾರ ಎರಡು ವರ್ಷ ಕಳೆದರೂ ಸಹಿತ ವಿಶ್ವ ವಿದ್ಯಾಲಯಗಳ ಅಭಿವೃದ್ಧಿಗೆ ಕಿಂಚಿತ್ತು ಗಮನಕೊಡದೆ ಈಗ ಮೂಲ ಸೌಲಭ್ಯಗಳ ನೆಪವೊಡ್ಡಿ ಮುಚ್ಚುತ್ತಿರುವುದನ್ನು ನೋಡಿದರೆ ಸರ್ಕಾರ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯಪಾಲರು ತಕ್ಷಣ ಮಧ್ಯೆ ಪ್ರವೇಶ ಮಾಡಬೇಕು ಎಂದು ಎಬಿವಿಪಿ ಒತ್ತಾಯಿಸುತ್ತದೆ ಎಂದರು.

ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ, ಸಹ ಕಾರ್ಯದರ್ಶಿ ಸ್ನೇಹಾ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net