

ಆನಂದಪುರ: ಈ ವರ್ಷ ಜುಲೈ ಮತ್ತು ಅಗಷ್ಟ್ ತಿಂಗಳಿನಲ್ಲಿ ಮಳೆ ಸರಿಯಾಗಿ ಸುರಿಯದ ಕಾರಣ ಮುಂಗಾರು ಮಳೆ ವೈಫಲ್ಯವಾಗಿದೆ. ಜುಲೈ ಕೊನೆಯ ವಾರದಲ್ಲಿ ಅತ್ಯಧಿಕ ಮಳೆ ಸುರಿದು ಕೆರೆ, ಹೊಳೆ -ಹಳ್ಳಗಳು ತುಂಬಿ ಹರಿಯಲಾರಂಭಿಸಿದ್ದವು. ಮಲೆನಾಡಿನ ಪ್ರಮುಖ ಅಣೆಕಟ್ಟುಗಳಿಗೆ ಸಾಕಷ್ಟು ನೀರು ಹರಿದು ಬಂದ ಕಾರಣ ಅರ್ಧದಷ್ಟು ಭರ್ತಿಯಾಗಿದ್ದವು. ಆದರೆ ನಂತರದ ದಿನಗಳಲ್ಲಿ ಮಳೆ ಮಾಯವಾಗಿ ನಿತ್ಯ ಬಿರುಬಿಸಿಲು ಝಳಪಿಸುತ್ತಿದೆ.
ಕಾಡು, ಬೆಟ್ಟ, ಹೊಳೆ, ಹಳ್ಳ, ಕೆರೆ ಹಾಗೂ ಗದ್ದೆಗಳಲ್ಲಿ ಜಲ ಒಡೆದು ಭೂಮಿ ತೇವವಾಗಿದ್ದವು. ಮಳೆ ಸಂಪೂರ್ಣ ನಿಂತು ಹೋದ ಕಾರಣ ಭೂಮಿಯಿಂದ ಉಕ್ಕಿ ಹರಿಯುವ ಜಲ ಮೂಲಗಳು ಬತ್ತಿ ಹೋಗಿವೆ. ಹೊಳೆ-ಹಳ್ಳಗಳ ನೀರಿನ ಮೂಲ ಸೆಲೆ ಮಾತ್ರವಾಗಿದೆ.
ಇಲ್ಲಿನ ಪ್ರಮುಖ ಹೊಳೆಯಾದ ನವಟೂರು ಹೊಳೆ, ಹೊಸೂರಿನ ನಂದಿಹೊಳೆ, ಕಣ್ಣೂರಿನ ಆರು ಕಟ್ಟಿನ ಹೊಳೆ ಮತ್ತು ನಂಜವಳ್ಳಿಯ ಹೊಳೆಗಳಲ್ಲಿ ಅತ್ಯಂತ ಕ್ಷೀಣ ಸ್ಥಿತಿಯಲ್ಲಿ ನೀರು ಹರಿಯುತ್ತಿದೆ. ಹೊಳೆ ಮತ್ತು ಹಳ್ಳದ ಎರಡೂ ಕಡೆಯ ಭತ್ತದ ಗದ್ದೆ, ಅಡಕೆ ತೋಟ, ಮೆಕ್ಕೆಜೋಳ ಹಾಗೂ ಶುಂಠಿ ಕೃಷಿಗೆ ರೈತರು ಪಂಪ್‌ಸೆಟ್ ಮೂಲಕ ನೀರಾವರಿ ನಡೆಸುತ್ತಿದ್ದಾರೆ. ಆಷಾಢ ಮತ್ತು ಶ್ರಾವಣ ಮಾಸಗಳಲ್ಲಿ ಪಂಪ್‌ಸೆಟ್ ನೀರಾವರಿ ನಡೆಸುವಂತಹ ಭೀಕರ ಸ್ಥಿತಿ ಭವಿಷ್ಯದ ಬಗ್ಗೆ ಕರಿನೆರಳು ಚಾಚುವಂತೆ ಮಾಡಿದೆ. ಭತ್ತದ ಗದ್ದೆಗಳಲ್ಲಿ ಸಾಕಷ್ಟು ನೀರು ಸಿಗದೆ ಭೂಮಿ ಅಲ್ಲಲ್ಲಿ ಬಿರಿ ಬಿಟ್ಟ ಸ್ಥಿತಿ ನಿರ್ಮಾಣವಾಗಿದೆ.
ಆನಂದಪುರ ವ್ಯಾಪ್ತಿಯ ಪ್ರಮುಖ ಅಣೆಕಟ್ಟೆಯಾದ ಅಂಬ್ಲಿಗೊಳ ಜಲಾಶಯ ಮತ್ತು ಕೊಲ್ಲಿಬಚ್ಚಲು ಅಣೆಕಟ್ಟೆ ಈ ವರ್ಷ ತುಂಬಿ ಹರಿದಿದ್ದರೂ ಆಗಸ್ಟ್ಟ್ ಕೊನೆಯ ವಾರದ ಸುಮಾರಿಗೆ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸಾಕಷ್ಟು ಶ್ರಮ ವಹಿಸಿ ಕೃಷಿ ನಡೆಸಿದರೂ ಮಳೆಯಿಲ್ಲದ ಕಾರಣ ತಮ್ಮ ಬೆಳೆಗಳು ಹಾಳಾಗುವ ಭೀತಿಯಲ್ಲಿ ರೈತರು ಹರಸಾಹಸದಿಂದ ನೀರಾವರಿ ನಡೆಸುತ್ತಿದ್ದಾರೆ. ಆಗಾಗ್ಗೆ ಮೋಡ ಕಂಡಾಗ ಇವತ್ತು ಮಳೆ ಆರಂಭವಾಗುತ್ತದೆ ಎಂಬ ಆಶಾಭಾವದಿಂದ ರೈತರು ಕಾತರಿಸುತ್ತಿದ್ದಾರೆ.
ಈ ವ್ಯಾಪ್ತಿಯ ಬಹುತೇಕ ರೈತರ ಮೆಕ್ಕೆಜೋಳದ ಸಸಿಗಳು ಚೆನ್ನಾಗಿ ಚಿಗುರದೆ ಕುಬ್ಜ ಸ್ಥಿತಿಯಲ್ಲಿವೆ. ಮೆಕ್ಕೆಜೋಳ ತೆನೆ ಕಟ್ಟುವ ಸಮಯವಾದರೂ ಗಿಡದ ಬೆಳೆವಣಿಗೆ ನಿರೀಕ್ಷೆಯಷ್ಟು ಇಲ್ಲವಾಗಿದೆ. ಸ್ಪಿಂಕ್ಲರ್ ಇತ್ಯಾದಿ ಮೂಲಕ ಕೆಲವು ರೈತರು ನೀರಾವರಿ ನಡೆಸಿದರೂ ಎಲ್ಲ ಗಿಡಗಳಿಗೂ ನೀರು ದೊರೆಯುತ್ತಿಲ್ಲ. ಮೋಡ ಬಿತ್ತನೆ ಮೂಲಕವಾದರೂ ಕೃತಕ ಮಳೆ ತರಿಸಿ ರೈತರ ನೆರವಿಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.