

ಮದ್ದೂರು: ಸ್ವೀಡನ್ ದೇಶದಿಂದ 29 ವರ್ಷಗಳ ಬಳಿಕ ಬಂದ ಜೋಲಿ ಅವರಿಗೆ ತನ್ನ ತಾಯಿ ಬದುಕಿಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ. ಜತೆಗೆ ಇನ್ನಷ್ಟು ಕುತೂಹಲಕಾರಿ ಅಂಶಗಳು ತಿಳಿದು ಬಂದಿವೆ. ಹೆತ್ತಮ್ಮನಿಗಾಗಿ ಇಲ್ಲಿನ ದೇಶಹಳ್ಳಿ ಗ್ರಾಮಕ್ಕೆ ಬಂದಿದ್ದ ಜೋಲಿಗೆ ಗ್ರಾಮಸ್ಥರು ಆಕೆಯ ತಾಯಿ ಅಂದೇ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೋಲಿ ಅಜ್ಜ (ಹೆಸರು ಗೊತ್ತಾಗಿಲ್ಲ) ಶಿವಪುರದ ಶಿವಪುರದಮ್ಮ ಎಂಬಾಕೆಯನ್ನು ವಿವಾಹವಾಗಿ ದೇಶಹಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಅವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಲಕ್ಷ್ಮೀ (ಜೋಲಿ ತಾಯಿ) ಇದ್ದು, ಲಕ್ಷ್ಮೀಗೆ ನಾಗಮಂಗಲದ ವ್ಯಕ್ತಿ ಜತೆ ಮದುವೆ ಮಾಡಲಾಗಿತ್ತು. ದಂಪತಿಗೆ ಜೋಲಿ ಹಾಗೂ 2 ಗಂಡು ಮಕ್ಕಳು ಜನಿಸಿದ್ದರು.
ಸ್ವಲ್ಪ ಕಾಲದಲ್ಲಿ ಪತಿ ಮರಣ ಹೊಂದಿದ್ದು, ಬಳಿಕ ಲಕ್ಷ್ಮೀ ಮಕ್ಕಳೊಂದಿಗೆ ದೇಶಹಳ್ಳಿ ಗ್ರಾಮಕ್ಕೆ ಬಂದು ಜೀವನ ನಡೆಸುತ್ತಿದ್ದಳು. ಈ ವೇಳೆ ಲಕ್ಷ್ಮೀಗೆ ಕ್ಯಾನ್ಸರ್ ಇರುವುದು ಗೊತ್ತಾಗಿದ್ದು, ನೊಂದ ಮಕ್ಕಳೊಂದಿಗೆ ಆತ್ಮಹತ್ಯೆಗೆ ಮುಂದಾದಾಗ ಜೋಲಿ ಹೆದರಿ ತಾಯಿಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದಳು. ಒಬ್ಬ ಮಗನೊಂದಿಗೆ ಲಕ್ಷ್ಮೀ ಮದ್ದೂರಮ್ಮನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೊಬ್ಬ ಪುತ್ರ ಏನಾದ ಎಂಬ ಮಾಹಿತಿಯಿಲ್ಲ. ಗ್ರಾಮಸ್ಥರು ಲಕ್ಷ್ಮೀ ಮತ್ತು ಪುತ್ರನ ಅಂತ್ಯಕ್ರಿಯೆ ನೆರವೇರಿಸಿದ್ದರು. ಇದೀಗ ಜೋಲಿ ತನ್ನ ಸಂಬಂಧಿಕರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಅನಾಥಾಶ್ರಮಕ್ಕೆ ಸೇರಿಸಿದ್ದರು: ಲಕ್ಷ್ಮೀಯ ಸಂಬಂಧಿಕರೊಬ್ಬರು ಜೋಲಿಯನ್ನು ಬೆಂಗಳೂರಿನ ಅನಾಥಾಶ್ರಮಕ್ಕೆ ಸೇರಿಸಿದ್ದರು. ಅಲ್ಲಿಂದ ಜೋಲಿಯನ್ನು ಸ್ವೀಡನ್ನ ದಂಪತಿ ದತ್ತು ಪಡೆದುಕೊಂಡರು. ತಾಯಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ, ಮದ್ದೂರಮ್ಮನ ಕೆರೆ, ಆದಿಶಕ್ತಿ ದೇವಸ್ಥಾನ ನೆನಪಿಗೆ ಬಂದು ಪತಿಯೊಂದಿಗೆ ಜೋಲಿ ಗ್ರಾಮಕ್ಕೆ ಆಗಮಿಸಿದ್ದು, ತನ್ನವರಿಗಾಗಿ ಹುಡುಕಾಡುತ್ತಿದ್ದಾರೆ.