‘ಕೊಲ್ಲುತ್ತೇನೆ’ ಎನ್ನುತ್ತಿದ್ದ ಗಂಭೀರವಾಗಿ ಪರಿಗಣಿಸಿರಲಿಲ್ಲ ತಾಯಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ‘ನಿಮ್ಮನ್ನು ಅಕ್ಕ ನೋಡಿಕೊಳ್ಳುತ್ತಾಳೆ. ನನ್ನ ಪ್ರೀತಿಸದ ಲಾವಣ್ಯಳನ್ನು ಕೊಲ್ಲುತ್ತೇನೆ’ ಎಂದು ಕೆಲವು ಸಮಯಗಳ ಹಿಂದೆ ಮನೆಯಲ್ಲಿ ಆಗಾಗ ಹೇಳುತ್ತಿದ್ದ. ಅದೆಲ್ಲ ಬಾಯಲ್ಲಿ ಹೇಳುವಷ್ಟು ಸುಲಭದ ಕೆಲಸ ಅಲ್ಲ. ಹೆದರಿಸಲು ಹಾಗೆ ಹೇಳುತ್ತಿದ್ದಾನೆ ಎಂದು ನಾವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗೆ ಹೇಳುವಾಗ ಆತನಿಗೆ ಬೈದು ಸುಮ್ಮನಾಗಿದ್ದೆವು ಎಂದು ಬಿಸಿರೋಡ್‌ನಲ್ಲಿ ಲಾವಣ್ಯಳನ್ನು ಕೊಲೆಗೈದ ಚೇತನ್‌ನ ತಾಯಿ ಹೇಳಿಕೆ ನೀಡಿದ್ದಾರೆ.
ಹತ್ತನೇ ತರಗತಿಯಿಂದ ಲಾವಣ್ಯಳನ್ನು ಪ್ರೀತಿಸುತ್ತಿದ್ದ. ಅವಳ ಮನೆಯವರಿಗೂ ಈ ವಿಷಯ ಗೊತ್ತಿತ್ತು. ಅವರು ಟಾರ್ಚರ್ ಕೊಡುತ್ತಿದ್ದಾನೆ ಎಂದು ಹೇಳಿದ್ದರು. ಆಗ ಈತನಿಗೆ ಬುದ್ದಿವಾದ ಹೇಳಿದ್ದೆ. ಮದುವೆಗೆ ಒಪ್ಪಿಸುವಂತೆ ಮನೆಯವರ ಜತೆ ಮಾತನಾಡಲು ಆಗಲೇ ಹೇಳಿದ್ದ. ಆದರೆ ಅವಳಿಗೆ ಅಕ್ಕ ಇರುವುದರಿಂದ ಮತ್ತು ಪ್ರಾಯವೂ ಆಗದೇ ಇರುವುದರಿಂದ ಇವಳನ್ನು ಹೇಗೆ ಕೇಳುವುದು ಎಂದು ಸುಮ್ಮನಿದ್ದೆ. ಆಕೆಯ ತಂದೆಯ ಮಾತಿನಂತೆ ಆಕೆ ಇವನೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದಳು. ಅವರ ಪ್ರೀತಿ ಬ್ರೇಕಪ್ ಆಗಿತ್ತು ಎಂದು ಮನೆಗೆ ಭೇಟಿ ನೀಡಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕೆಲವು ದಿನಗಳ ಹಿಂದೆ ಆಂಟಿಗೆ ಫೋನ್ ಮಾಡಿ ಅವಳಲ್ಲಿ ನನ್ನೊಂದಿಗೆ ಒಮ್ಮೆ ಮಾತನಾಡಲು ಹೇಳಿ ಎಂದು ಕೂಗಿಕೊಂಡು ಹೇಳಿದ್ದ. ಅವನನ್ನು ಸಮಾಧಾನ ಮಾಡಿ, ಮದುವೆಯ ಸಮಯ ಬಂದಾಗ ಮಾತನಾಡಿ ಹೇಗಾದರೂ ಮಾಡಿ ಒಪ್ಪಿಸುತ್ತೇವೆ ಎಂದು ಭರವಸೆ ನೀಡಿದ್ದೆ. ಆದರೆ ಈಗ ನಡೆಯಬಾರದ ಘಟನೆ ನಡೆದು ಹೋಗಿದೆ. ಮಗನಾದರೂ ಆತ ಮಾಡಿದ್ದು ತಪ್ಪು. ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಬಹಳಷ್ಟು ಆಸೆಗಳನ್ನು ಇಟ್ಟುಕೊಂಡಿದ್ದೆವು. ಈಗ ನಡು ದಾರಿಯಲ್ಲಿ ಬಿಟ್ಟು ಹೋಗಿದ್ದಾನೆ. ಅವನ ಭವಿಷ್ಯವೇ ಹಾಳಾಯಿತು. ಮಕ್ಕಳು ಬೆಳೆದು ಒಳ್ಳೆಯ ಜೀವನ ಕಟ್ಟಿಕೊಳ್ಳಬೇಕು ಎಂದು ಕಷ್ಟ ಪಟ್ಟು ವಿದ್ಯಾಭ್ಯಾಸ ಕೊಟ್ಟು ಬೆಳೆಸಿದೆವು. ಇಂತಹ ದುಸ್ಥಿತಿ ಬರುತ್ತದೆ ಎಂದು ಕನಸ್ಸಲ್ಲೂ ನೆನೆಸಿರಲಿಲ್ಲ. ಮಗಳಿಗೂ ಡಿಸೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿದೆ. ಜೀವನದಲ್ಲಿ ಎಲ್ಲವೂ ಸಿಗುತ್ತಿದ್ದಾಗ ನೆಮ್ಮದಿ ಕಳೆದುಕೊಂಡೆವು ಎಂದು ಕಣ್ಣೀರಿಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಿಂದ ಬಂದದ್ದೇ ಗೊತ್ತಿಲ್ಲ: ಡಿಪ್ಲೋಮಾ ಇನ್ ಮೆಕಾನಿಕ್ ಕೋರ್ಸ್ ಮಾಡಿದ್ದ ಆತ ಸ್ವಲ್ಪ ಸಮಯ ಊರಲ್ಲೇ ಇದ್ದ. ಮನೆ ನಿರ್ಮಾಣದ ಕೆಲಸವೂ ಅರ್ಧದಲ್ಲಿ ನಿಂತಿದೆ. ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೋಗಿ ಅಲ್ಲಿ ಬಿಡದಿಯಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಮೊನ್ನೆ ಏಕಾಏಕಿ ಬೆಂಗಳೂರಿನಿಂದ ಬಂದವ ಮನೆಗೆ ಬಂದಿಲ್ಲ. ಮನೆಗೆ ಬರುತ್ತಿದ್ದರೆ ಆತನನ್ನು ವಿಚಾರಿಸುತ್ತಿದ್ದೆ. ಆತ ನೇರವಾಗಿ ಬಿಸಿರೋಡ್‌ಗೆ ಹೋಗಿ ಕೃತ್ಯ ಎಸಗಿದ್ದಾನೆ. ಘಟನೆ ನಡೆದ ಬಳಿಕ ನನಗೆ ಕರೆ ಮಾಡಿ ವಿಷಯ ಹೇಳಿದ್ದಾನೆ. ಮರುದಿನ ಮತ್ತೆ ಕರೆ ಮಾಡಿ ನನಗೆ ಪಶ್ಚಾತಾಪ ಆಗುತ್ತಿದೆ. ವಿಷ ಸೇವಿಸಿದ್ದೇನೆ ಎಂದು ಹೇಳಿದ್ದಾನೆ. ಆಗ ಇಷ್ಟೆಲ್ಲಾ ಆದ ಮೇಲೆ ಏನು ಮಾಡಲೂ ಸಾಧ್ಯವಿಲ್ಲ. ಪೊಲೀಸರಿಗೆ ಶರಣಾಗುವಂತೆ ಹೇಳಿದ್ದೇನೆ ಎಂದು ಚೇತನ್ ಗೌಡನ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net