

ಅಣ್ಣಿಗೇರಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು ವರ್ಷದ ಅಪರಿಚಿತ ಬಾಲಕ ಕಾಣಿಸಿಕೊಂಡಾಗ ಸ್ಥಳೀಯ ಆರಕ್ಷಕ ಠಾಣೆ ಸಿಬ್ಬಂದಿ ಶಂಕರಗೌಡ ರಾಮನಗೌಡ ಹಾಗೂ ಶಾಸಕರ ಆಪ್ತ ಸಿಬ್ಬಂದಿ ಅಣ್ಣಿಗೇರಿಯ ಮಂಜುನಾಥ ದಿಡ್ಡಿಯವರ ಸಮಯ ಪ್ರಜ್ಞೆಯಿಂದ ಮಗು ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿತು. ಗುರುವಾರ ಬೆಳಗಿನಜಾವ ನವಲಗುಂದದಲ್ಲಿ ಅಣ್ಣಿಗೇರಿ ಬಸ್ ಏರಿದ ಬಾಲಕ ಬಸ್ ನಿಲ್ದಾಣದಲ್ಲಿ ಸಮಯ ಕಳೆದು ಮತ್ತೆ ಲಕ್ಷ್ಮೇಶ್ವರ ಬಸ್ ಏರಿದೆ. ಬಸ್ ಹೊರಟಿದೆ ಆಗ ನಿರ್ವಾಹಕ ಬಾಲಕನ ವಿಷಯವನ್ನು ಡಿಪೋ ವ್ಯವಸ್ಥಾಪಕರಿಗೆ ಪೋನ್ ಮಾಡಿ ತಿಳಿಸಿದ್ದಾರೆ. ಮತ್ತೆ ಅದೇ ಬಸ್ನಲ್ಲಿ ಬಾಲಕನನ್ನು ಅಣ್ಣಿಗೇರಿಗೆ ಕರೆ ತಂದಿದ್ದಾರೆ. ಅಣ್ಣಿಗೇರಿಯಲ್ಲಿ ಆಟೋ ರಿಕ್ಷಾ ಚಾಲಕರು ಬಾಲಕನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಂತರ ಠಾಣೆಯ ಸಿಬ್ಬಂದಿ ಶಂಕರಗೌಡ ರಾಮನಗೌಡ ಹಾಗೂ ಶಾಸಕರ ಆಪ್ತ ಸಿಬ್ಬಂದಿ ಅಣ್ಣಿಗೇರಿಯ ಮಂಜುನಾಥ ದಿಡ್ಡಿಯವರು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಪಾಲಕರಿಗಾಗಿ ಹುಡುಕಾಟ ನಡೆಸಿದರು. ಏನು ತೋಚದೆ ಕೊನೆಗೆ ಮಂಜುನಾಥ ಅವರು ಸಾಮಾಜಿಕ ಜಾಲತಾಣಕ್ಕೆ ಬಾಲಕನ ಭಾವಚಿತ್ರ ಹರಿಬಿಟ್ಟರು. ಕೆಲ ಸಮಯದ ನಂತರ ಈ ಮಗು ನವಲಗುಂದದ್ದು ಎಂದು ತಿಳಿಯಿತು. ತಕ್ಷಣವೇ ನವಲಗುಂದದ ನಿವಾಸಿ ಕರೆ ಮಾಡಿ ಈ ಬಾಲಕ ನಮ್ಮದು ಎಂದು ಹೇಳಿದರು. ಆಗ ವಿಡಿಯೋ ಕಾಲ್ ಮುಖಾಂತರ ಮಗುವಿನ ಜೊತೆ ಮಾತನಾಡಿದ ದಂಪತಿ ಅಣ್ಣಿಗೇರಿಗೆ ಬಂದು ಮಡಿಲಿಗೆ ಹಾಕಿಕೊಂಡಿತು.