

ಪಟ್ಟನಾಯಕನಹಳ್ಳಿ: ಭಕ್ತಿ ನಿಷ್ಠೆ ಪ್ರಾಮಾಣಿಕತೆಯಿಂದಲೇ ಶ್ರೀರಾಮಚಂದ್ರನ ಭಂಟನಾಗಿದ್ದ ಶ್ರೀ ಆಂಜನೇಯಸ್ವಾಮಿ ಹೆಚ್ಚು ದೈವಶಕ್ತಿ ಹೊಂದಿರುವ ದೇವರು. ದೇಶದಲ್ಲಿ ಯಾವುದಾದರೂ ದೇವರಿಗೆ ದೇವಸ್ಥಾನಗಳು ಹೆಚ್ಚಾಗಿದ್ದಾವೆ ಅಂದರೆ ಅದು ಶ್ರೀ ಆಂಜನೇಯಸ್ವಾಮಿಗೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಪ್ರಸಿದ್ಧ ಶ್ರೀ ಕ್ಷೇತ್ರ ಗುಣ್ಣಯ್ಯನ ಗುಡಿಯಲ್ಲಿ ನೂತನವಾಗಿ ನಿಮಾರ್ಣವಾಗಿರುವ ಶ್ರೀಗುಂಡಾಂಜನೇಯಸ್ವಾಮಿ ದೇವಸ್ಥಾನದ ಶಿಖರ ಕಲಶ ಸ್ಥಾಪನೆ ಹಾಗೂ ಬೆಳ್ಳಿ ವಿಗ್ರಹ ಪ್ರಭಾವಳಿ ಅರ್ಪಣಾ ಮಹೋತ್ಸವದಲ್ಲಿ ಮಾತನಾಡಿದರು.
ಶುದ್ಧ ಮತ್ತು ಮುಗ್ಧ ಮನಸ್ಸಿನಿಂದ ಶ್ರೀ ಗೂಂಡಾಂಜನೇಯ ಸ್ವಾಮಿಯನ್ನು ಆರಾಧಿಸಿ ಪೂಜಿಸಿದರೆ ಕಷ್ಟಗಳು ದೂರವಾಗಲಿವೆ. ಸುಕ್ಷೇತ್ರ ಅಭಿವೃದ್ಧಿಗೆ ಭಕ್ತರೆಲ್ಲರೂ ಒಗ್ಗೂಡಿ ದೇವರಿಗೆ ಭವ್ಯ ದೇಗುಲ ನಿಮಾರ್ಣ ಮಾಡಿರುವುದು ಹರ್ಷ ತಂದಿದೆ. ಶ್ರೀಗುಂಡಾಂಜನೇಯ ಸ್ವಾಮಿ ದೇವಸ್ಥಾನ ಪೂರ್ಣಗೊಳಲು ಮತ್ತಷ್ಟು ಆರ್ಥಿಕ ಸಹಾಯ ಅಗತ್ಯವಿದ್ದು, ಉಳ್ಳವರು ಮುಕ್ತ ಮನಸ್ಸಿನಿಂದ ದೇವಸ್ಥಾನ ಅಭಿವೃದ್ಧಿಗೆ ನೆರವು ನೀಡಬೇಕು. ಶತಮಾನದ ಇತಿಹಾಸ, ದೈವಿಕ ಶಕ್ತಿ ಹೊಂದಿರುವ ಶ್ರೀಗುಂಡಾಂಜನೇಯಸ್ವಾಮಿ ಸುಕ್ಷೇತ್ರ ಲಕ್ಷಾಂತರ ಭಕ್ತರ ಪುಣ್ಯಕ್ಷೇತ್ರ ವಾಗಲಿ ಎಂದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್, ತಾಪಂ ಮಾಜಿ ಅಧ್ಯಕ್ಷ ನಿಡಗಟ್ಟೆ ಚಂದ್ರಶೇಖರ್, ಶ್ರೀಗುಂಡಾಂಜನೇಯಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಹನುಮಂತ ರಾಯಪ್ಪ, ಸೋಮಣ್ಣ, ಗುಂಡಪ್ಪ, ಹನುಮಂತಪ್ಪ ಇತರರು ಇದ್ದರು.