

ಚಿಂತಾಮಣಿ : ತಾಲೂಕಿನ ಗುಡಿ ಆಲಂಬಗಿರಿಯ ಲಕ್ಷ್ಮೀವೆಂಕಟರವಣಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ದೇವಾಲಯದ ಸಮೀಪವಿರುವ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ರಾಶಿ ರಾಶಿ ನಾಗರಕಲ್ಲುಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ.
ಆಲಂಬಗಿರಿ-ಮುನುಗನಹಳ್ಳಿ ಮುಖ್ಯರಸ್ತೆಯ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಆಲಂಬಗಿರಿ ಗ್ರಾಮದ ಹೆಗ್ಗಡಿ ಮುನಿಯಪ್ಪ ಕುಟುಂಬ ಜಾಗ ಹೊಂದಿದ್ದು, ಇಲ್ಲಿ ಪುರಾತನ ಕಾಲದಲ್ಲಿ ಪ್ರತಿಷ್ಠಾಪಿಸಿದ್ದ ನಾಗರಕಲ್ಲುಗಳಿಗೆ ಪ್ರತಿವರ್ಷ ನಾಗರಪಂಚಮಿ, ಗಣೇಶ ಚತುರ್ಥಿ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಹೆಗ್ಗಡಿ ಮುನಿಯಪ್ಪ ನಿಧನರಾದ ನಂತರ ಸದರಿ ನಾಗರಕಲ್ಲುಗಳಿಗೆ ಕ್ರಮೇಣ ಪೂಜೆ ಸಲ್ಲಿಸುವುದನ್ನು ಕುಟುಂಬದವರು ನಿಲ್ಲಿಸಿದ್ದರು. ಇತ್ತೀಚೆಗೆ ಕುಟುಂಬದ ಸದಸ್ಯರು ಸಮಸ್ಯೆಯೊಂದರ ಬಗ್ಗೆ ಶಾಸ್ತ್ರ ಹೇಳುವವರ ಮೊರೆ ಹೋದಾಗ ಆಲಂಬಗಿರಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ನಾಗರಕಲ್ಲುಗಳಿಗೆ ಪೂಜೆಯನ್ನು ನಿಲ್ಲಿಸಿದ್ದು, ಕೂಡಲೇ ಪೂಜೆ ಸಲ್ಲಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಜ್ಯೋತಿಷ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಸೋಮವಾರ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಲು ಹೋಗಿದ್ದರು. ಇತ್ತೀಚೆಗೆ ಸುರಿದ ಮಳೆಯಿಂದ ಮಣ್ಣು ಹರಿದು ಮುಚ್ಚಿಹೋಗಿದ್ದ ನಾಗರ ಕಲ್ಲುಗಳನ್ನು ಮೇಲಕ್ಕೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ವೇಳೆ ಗುಂಡಿ ತೆಗೆದಾಗ ಹಲವು ನಾಗರ ಕಲ್ಲುಗಳು ಸಿಕ್ಕಿವೆ. ಗುಂಡಿಯನ್ನು ಇನ್ನಷ್ಟು ತೋಡಿದಾಗ ಮತ್ತಷ್ಟು ನಾಗರಕಲ್ಲುಗಳು ಸಿಕ್ಕಿವೆ. ಮಂಗಳವಾರ ಬೆಳಗ್ಗೆ ಮತ್ತೆ ಗುಂಡಿಯನ್ನು ಅಗೆದಷ್ಟು ವಿವಿಧ ಆಕೃತಿಯ ನಾಗರಕಲ್ಲುಗಳು, ದೇವತೆಗಳು ಇರುವ ನೂರು ನಲವತ್ತಕ್ಕೂ ಹೆಚ್ಚು ಕಲ್ಲುಗಳು ದೊರೆತಿವೆ.
ವಿಷಯ ತಿಳಿಯುತ್ತಿದ್ದಂತೆ ಅಲಂಬಗಿರಿ, ಮುನುಗನಹಳ್ಳಿ ಸೇರಿ ಸುತ್ತಮುತ್ತಲಿನ ನೂರಾರು ಮಂದಿ ನಾಗರಕಲ್ಲುಗಳನ್ನು ನೋಡಲು ಆಗಮಿಸಿದ್ದರು. ನಾಗರಕಲ್ಲುಗಳನ್ನು ಕಂಡುಆಶ್ಚರ್ಯ ವ್ಯಕ್ತಪಡಿಸಿದರು.
ತಹಸೀಲ್ದಾರ್ ಸುದರ್ಶನ್ ಯಾದವ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಪುರಾತತ್ವ ಇಲಾಖೆ ಗಮನಕ್ಕೆ ತಂದಿದ್ದಾರೆ. ನಾಗರಕಲ್ಲುಗಳು ಸಿಕ್ಕಿದ ಜಾಗದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ.