ಹಿಡಿದಷ್ಟೂ ಹೆಚ್ಚುತ್ತಿದೆ ಗಾಂಜಾ ಘಾಟು

The more you catch, the more marijuana you'll get.
Published on

ಮಂಜುನಾಥ ಸಾಯೀಮನೆ ಶಿರಸಿ

ಪಾಲಕರೇ ಎಚ್ಚರ...ಯುವ ಜನತೆ ಮತ್ತು ಕಾಲೇಜ್ ವಿದ್ಯಾರ್ಥಿಗಳನ್ನೇ ತಮ್ಮ ಮಾರುಕಟ್ಟೆಯಾಗಿಸಿಕೊಂಡು ಹೊರ ಜಿಲ್ಲೆಗಳಿಂದ ಆಗಮಿಸಿ ಗಾಂಜಾ ಮಾರುವವರು ಈಗ ತಾಲೂಕಿನಲ್ಲಿ ಸಕ್ರೀಯರಾಗಿಯೇ ಇದ್ದಾರೆ. ಪೊಲೀಸ್ ಇಲಾಕೆ ಹದ್ದಿನ ಕಣ್ಣಿಟ್ಟು, ಗಾಂಜಾ ಮಾರಾಟಗಾರರನ್ನು ಮಟ್ಟಹಾಕಲು ಹಗಲಿರುಳು ಶ್ರಮಿಸುತ್ತಿದ್ದರೂ ಹೊರ ಜಿಲ್ಲೆಯ ಪೂರೈಕೆದಾರರು 100 ಅಥವಾ 200 ಗ್ರಾಂಗಳ ಸಣ್ಣ ಪ್ಯಾಕೇಟ್‌ಗಳ ಮೂಲಕ ತಂದು ಇಲ್ಲಿ ತಲುಪಿಸುತ್ತಿದ್ದಾರೆ.

ಹೌದು, ಗಾಂಜಾ ಇಂದು ಸಮಾಜದ ವ್ಯವಸ್ಥೆಯನ್ನು ಹದಗೆಡಿಸುವ ಮಾದಕ ವಸ್ತು. ಗಾಂಜಾ ಸೇವನೆ, ಮಾರಾಟ ಎಲ್ಲೆಡೆ ಕಾಣದ ಕಬಂದ ಬಾಹುವಾಗಿ ಕಾಡುತ್ತಿದೆ. ಆದರೆ, ಶಿರಸಿಯಲ್ಲಿ ಮಾತ್ರ ಗಾಂಜಾ ಮಾರುವವರಿಗೆ ಯುವ ಜನತೆ, ಕಾಲೇಜು ವಿದ್ಯಾರ್ಥಿಗಳೇ ಗುರಿಯಾಗಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಗಾಂಜಾ ಸೇವಿಸಿಕೊಂಡು ಓಡಾಡುವವರು, ಅದರ ಅಮಲಿನಲ್ಲಿ ಬೈಕ್ ಓಡಿಸುವವರು ಹೆಚ್ಚಾಗುತ್ತಿದ್ದು, ನಿಯಂತ್ರಿಸಲು ಇಲಾಖೆ ಹರ ಸಾಹಸ ಪಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರ ಪ್ರದೇಶಕ್ಕೆ ಸೀಮಿತವಾಗುತ್ತಿದ್ದ ಪ್ರಕರಣಗಳು ಈಗ ಸುತ್ತಮುತ್ತಲಿನ ತಾಲೂಕುಗಳ ಗಡಿಗೂ ವಿಸ್ತರಿಸಿಕೊಳ್ಳುತ್ತಿದೆ. ಗಾಂಜಾ ಮತ್ತಿನಲ್ಲಿ ಓಡಾಡುತ್ತಿರುವವರು, ಗಾಂಜಾ ಸಾಗಾಟ ಮಾಡುತ್ತಿರುವವನ್ನು ಹಿಡಿದು ಶಿರಸಿಗೆ ಅಂಟಿರುವ ಗಾಂಜಾ ಘಾಟನ್ನು ದೂರಗೊಳಿಸಲು ಪೊಲೀಸ್ ಇಲಾಖೆ ಪ್ರಯತ್ನಿಸಿದಷ್ಟೂ ಈ ಪ್ರಕರಣಗಳು ಮತ್ತೆ ಮತ್ತೆ ಹೆಚ್ಚುತ್ತಲೇ ಇದೆ.

ಪ್ರಕರಣಗಳೆಷ್ಟು?

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗಾಂಜಾ ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಶಿರಸಿ ನಗರ ಠಾಣೆ ವ್ಯಾಪ್ತಿಯಲ್ಲಿ 2024ರಲ್ಲಿ 8 ಗಾಂಜಾ ಸಾಗಾಟದ ಪ್ರಕರಣಗಳು ದಾಖಲಾಗಿದ್ದರೆ ಈ ವರ್ಷ ಇಷ್ಟರೊಳಗೇ 12 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ 11 ಜನರನ್ನು ಬಂಧಿಸಲಾಗಿದೆ. ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ 3 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಇದುವರೆಗೆ 6 ಪ್ರಕರಣಗಳು, 7 ಜನರ ಬಂಧನವಾಗಿದೆ. ಬನವಾಸಿ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷವನ್ನೂ ಒಳಗೊಂಡು ಇದುವರೆಗೆ 3 ಪ್ರಕರಣಗಳು ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಇದು ಗಾಂಜಾ ಸಾಗಾಟ ಮಾಡುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ವೇಳೆ ಸೆರೆ ಸಿಕ್ಕ ಆರೋಪಿಗಳಾಗಿದ್ದರೆ ಗಾಂಜಾ ಸೇವನೆ ಮಾಡಿರುವ ಸಂಶಯದ ಮೇಲೆ ಪೊಲೀಸರು ನಗರದಲ್ಲಿ 15ಕ್ಕೂ ಅಧಿಕ ಜನರನ್ನು ಬಂಧಿಸಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದರು, ಅವುಗಳಲ್ಲಿ ಬಹುತೇಕ ಪ್ರಕರಣಗಳು ಧೃಢ ಪಟ್ಟಿವೆ. ಈ ಎಲ್ಲಕ್ಕಿಂತ ಆತಂಕಕಾರಿ ಎಂದರೆ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಗಾಂಜಾ ಸೇವನೆಯ ಪ್ರಕರಣ ಹೆಚ್ಚಾಗುತ್ತಿದೆ. ಯುವತಿಯರೂ ಸಹ ಗಾಂಜಾ ಸೇವನೆ ಮಾಡಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ನಗರದ ಹೊರ ವರ್ತುಲಗಳಲ್ಲಿ, ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ, ಚಿಪಗಿ ನಿರ್ಜನ ಪ್ರದೇಶದಲ್ಲಿ, ಪುಟ್ಟನಮನೆಗೆ ತೆರಳುವ ನಿರ್ಜನ ಜಾಗಗಳಲ್ಲಿ ವಿದ್ಯಾರ್ಥಿಗಳು, ಯುವಕರು ಕುಳಿತು ಗಾಂಜಾದ ಮೋಜಿನಲ್ಲಿ ನಿರತರಾಗಿರುತ್ತಾರೆ ಎನ್ನುತ್ತಾರೆ ಇಲ್ಲಿಯ ಸ್ಥಳೀಯರು.

ಬರುವುದೆಲ್ಲಿಂದ ?

ಪದೇ ಪದೇ ಹಿಡಿದರೂ ಸಹ ಮತ್ತೆ ಮತ್ತೆ ಗಾಂಜಾ ಸಾಗಾಟ ಹಾಗೂ ಸೇವನೆ ಹೆಚ್ಚುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ತಲೆ ಕೆಡಿಸಿಕೊಂಡಿದೆ. ತಾಲೂಕಿನ ಎಲ್ಲೆಡೆ ಶೋಧ ನಡೆಸಿದ್ದರೂ ಇಲ್ಲಿ ಗಾಂಜಾ ಬೆಳೆಯುತ್ತಿರುವ ಸ್ಥಳ ಪತ್ತೆಯಾಗಲಿಲ್ಲ. ಗಾಂಜಾ ಪ್ರಕರಣ ಹಿಡಿದಾಗಲೆಲ್ಲ ಸಾಗಾಟ ಮಾಡುತ್ತಿರುವವಲ್ಲಿ ಬಹುತೇಕ ಹೊರ ಜಿಲ್ಲೆಯವರೇ ಇರುತ್ತಿದ್ದರು.

ನಗರಕ್ಕೆ ಪೂರೈಕೆ ಆಗುತ್ತಿರುವುದು ಪಕ್ಕದ ಹಾವೇರಿ ಹಾಗೂ ಹಾನಗಲ್ ಭಾಗದಿಂದ. ಅಲ್ಲಿ ಬೆಳೆದ ಗಾಂಜಾವನ್ನು ಹದಗೊಳಿಸಿ ಅಲ್ಲಿಯವರೇ ಶಿರಸಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ನಗರಕ್ಕೆ ಬಂದ ಮಾಲನ್ನು ವ್ಯವಸ್ಥಿತವಾಗಿ ತಲುಪಿಸುವ ಜಾಲ ಕೂಡ ನಗರದಲ್ಲಿ ಸಕ್ರೀಯವಾಗಿವೆ. ಪೊಲೀಸ್ ಇಲಾಖೆ ಗಾಂಜಾ ಸಾಗಾಟದ ಬಗ್ಗೆ ಹದ್ದಿನ ಕಣ್ಣಿಟ್ಟ ಬಳಿಕವೂ ಸಾಗಾಟ ನಿಂತಿಲ್ಲ, ಆದರೆ, ತರುವ ಪ್ರಮಾಣ ಕಡಿಮೆ ಆಗಿದೆ. 100ಗ್ರಾಂ ಅಥವಾ 200 ಗ್ರಾಂ ಗಾಂಜಾವನ್ನು ಸಣ್ಣ ಪ್ಯಾಕೇಟ್ ಮಾಡಿಕೊಂಡು ಬಸ್ಸಿನ ಮೂಲಕವೇ ಅಲ್ಲಿಯವರು ಶಿರಸಿಗೆ ತರುತ್ತಿದ್ದಾರೆ. ಇಲ್ಲಿಯ ತಮ್ಮ ಜಾಲಕ್ಕೆ ಈ ಗಾಂಜಾ ಪೂರೈಸಿ, ಆರೆಂಟು ಸಾವಿರ ಜೇಬಿಗಿಳಿಸಿಕೊಂಡು ವಾಪಸಾಗಿ ಮಾರನೇ ದಿನ ಮತ್ತೆ ಅಷ್ಟೇ ಪ್ರಮಾಣದಲ್ಲಿ ಗಾಂಜಾವನ್ನು ಹಿಡಿದುಕೊಂಡು ಶಿರಸಿಗೆ ಮುಖ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಇನ್ನಷ್ಟು ಎಚ್ಚರಿಕೆ ವಹಿಸಿ, ಈ ಪೂರೈಕೆಯ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತಗೊಂಡಿದೆ.

ತಾಲೂಕಿನ ಮಣ್ಣಿನ ಗುಣಕ್ಕೆ ಗಾಂಜಾ ಬೆಳೆಯಲು ಸಾಧ್ಯವಿಲ್ಲ. ಆದರೆ, ಹಾನಗಲ್ ಮತ್ತು ಹಾವೇರಿಯಿಂದ ಸಣ್ಣ ಸಣ್ಣ ಪ್ಯಾಕೇಟ್‌ಗಳಲ್ಲಿ ಇಲ್ಲಿಗೆ ತಂದು ಪೂರೈಸುತ್ತಿದ್ದಾರೆ. ಈ ಪೂರೈಕೆದಾರರ ಬಗ್ಗೆ ನಾವು ಸದಾ ಜಾಗೃತವಾಗಿದ್ದು, ಮಟ್ಟಹಾಕುತ್ತಿದ್ದೇವೆ. ಶಶಿಕಾಂತ ವರ್ಮಾ, ಸಿಪಿಐ ಶಿರಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net