ಮೀಸಲಾತಿಯಲ್ಲಿ ಹೆಚ್ಚು ಕಡಿಮೆಯಾದರೇ ಹೋರಾಟ

4 kunigal 1 (1)
Published on

ಕುಣಿಗಲ್: ಸಾಮಾಜಿಕ, ಶೈಕ್ಷಣಿಕ, ಸಮೀಕ್ಷೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ನೀಡಿರುವ ಶೇ.4ರ ಮೀಸಲಾತಿಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೇ, 1994ರಲ್ಲಿ ನಡೆದ ಹೋರಾಟದ ಮಾದರಿಯಲ್ಲಿ ಹೋರಾಟ ನಡೆಸುವುದರ ಮೂಲಕ ರಾಜ್ಯದಲ್ಲಿ ಒಕ್ಕಲಿಗರು ಏನೆಂಬುದನ್ನು ತೋರಿಸಲಿದ್ದೇವೆ ಎಂದು ಪಟ್ಟನಾಯಕನಹಳ್ಳಿ ಡಾ.ನಂಜಾವಧೂತ ಸ್ವಾಮೀಜಿ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು.

ಪಟ್ಟಣದ ದಿವ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಹೊಸ ಜಾತಿ ಗಣತಿ) ಕುರಿತು ಒಕ್ಕಲಿಗ ಸಮಾಜ ಬಾಂಧವರ ಮಾಹಿತಿ ಹಾಗೂ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಒಕ್ಕಲಿಗ ಸಮುದಾಯವು ಸಾಮಾನ್ಯ ವರ್ಗಕ್ಕೆ ಸೇರಿರುವುದರಿಂದ ಸರ್ಕಾರದಿಂದ ಸಿಗಬೇಕಾಗಿರುವ ಸೌಲಭ್ಯದಿಂದ ಸಮುದಾಯದ ಜನರು ವಂಚಿತರಾಗಿದ್ದಾರೆ. ಈಗಲೂ ಸಹ ಲಕ್ಷಾಂತರ ಮಂದಿಗೆ ಸ್ವಂತ ಮನೆ ಇಲ್ಲ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲ ರೀತಿಯಲ್ಲೂ ನಮ್ಮ ಸಮುದಾಯಕ್ಕೆ ಮೀಸಲಾತಿ ಅತ್ಯಗತ್ಯವಾಗಿದೆ ಎಂದರು.

ಅ.7ರ ಒಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕೆಂದು ಸರ್ಕಾರ ಆಯೋಗ ಸೂಚನೆ ನೀಡಿದೆ, ಆದರೆ ಇನ್ನು ಸಾಕಷ್ಟು ಸಮೀಕ್ಷೆ ಕಾರ್ಯ ಬಾಕಿ ಇರುವಾಗಲೇ, ಹಿಂದುಳಿದ ವರ್ಗದ ಆಯೋಗವು ವರದಿ ಸಿದ್ದಪಡಿಸುತ್ತಿದೆ, ಏಕೆ ಈ ಆತುರದ ನಿರ್ಧಾಕ ಕೈಗೊಳ್ಳುತ್ತಿದೆ ಎಂದು ಸ್ವಾಮೀಜಿ ಪ್ರಶ್ನಿಸಿದರು. ಸಮೀಕ್ಷೆಯಲ್ಲಿ ಕಾರ್ಯದಲ್ಲಿ ಸಾಕಷ್ಟು ಗೊಂದಲಗಳಿವೆ, ಕಡಿಮೆ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಹೀಗಾಗಿ ಸರ್ಕಾರದ ಅಂಗವಾಗಿರುವ ಶಾಸಕ ಡಾ.ಎಚ್​.ಡಿ.ರಂಗನಾಥ್​ ಅವರು ಸರ್ಕಾರದ ಗಮನಕ್ಕೆ ತಂದು ಸಮೀಕ್ಷೆ ದಿನಾಂಕವನ್ನು ವಿಸ್ತರಿಸಬೇಕೆಂದು ಸ್ವಾಮೀಜಿ ಮನವಿ ಮಾಡಿದರು. .

ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥಸ್ವಾಮೀಜಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮತ್ತು ಜಾತಿ ಗಣತಿಯಿಂದ ಸಮುದಾಯದ ಶೇ.4 ಮೀಸಲಾತಿಗೆ ಕುತ್ತುಬರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕ ಡಾ.ಎಚ್​.ಡಿ.ರಂಗನಾಥ್​ ಮಾತನಾಡಿ, ಸರ್ಕಾರದ ಗಮನಕ್ಕೆ ತಂದು ಸಮೀಕ್ಷೆ ದಿನಾಂಕ ವಿಸ್ತರಿಸಲಾಗುವುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಅವರು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ ಎಲ್ಲ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲಿದ್ದಾರೆ ಹೀಗಾಗಿ ಯಾರಿಗೂ ಆತಂಕ ಬೇಡ ಎಂದು ಹೇಳಿದರು.

ಸಮೀಕ್ಷೆ ಮಾಡುವ ನೆಪದಲ್ಲಿ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯವನ್ನು ಒಡೆದು ಹಾಳುವಂತ ನೀತಿಯನ್ನು ಸಿ.ಎಂ ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ.

- ಡಿ.ನಾಗರಾಜಯ್ಯ, ಮಾಜಿ ಸಚಿವ

ನಾವೆಲ್ಲಾ ನೆಪ ಮಾತ್ರ, ಸಿಎಂ ಸಿದ್ದರಾಮಯ್ಯ ಅವರು ಗೊಂಬೆ ಹಾಡಿಸುತ್ತಿದ್ದಾರೆ. ಅದರಂತೆ ನಾವು ಹಾಡುತ್ತಿದ್ದೇವೆ ನಾವು ಎಲ್ಲಿ ಏನೇ ಚರ್ಚೆ ಮಾಡಿದರೂ ಪ್ರಯೋಜನವಿಲ್ಲ. ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹಾರವಾಗಬೇಕು ಆಗ ಮಾತ್ರ ಸಮೀಕ್ಷೆಯಲ್ಲಿ ನಮಗೆ ನ್ಯಾಯ ಸಿಗಲಿದೆ.

- ಬಿ.ಬಿ.ರಾಮಸ್ವಾಮಿಗೌಡ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net