ಗುಣಮಟ್ಟದ ಹಾಲು ಉತ್ಪಾದನೆ ಹೆಚ್ಚಿದರಷ್ಟೇ ಲಾಭ

05-Manjunath-HSK-01
ಹೊಸಕೋಟೆ ಡೇರಿಗೆ ಭೇಟಿ ನೀಡಿದ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರನ್ನು ಶಾಸಕ ಶರತ್ ಬಚ್ಚೇಗೌಡ ಹಾಗೂ ನೂತನ ನಿರ್ದೇಶಕರು ಸನ್ಮಾನಿಸಿದರು. ಬಿ.ವಿ.ಸತೀಶ್ ಗೌಡ, ಬಮುಲ್ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಬಿ.ವಿ.ಸತೀಶ್ ಗೌಡ, ಎಲ್‌ಎನ್‌ಟಿ ಮಂಜುನಾಥ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆ.ಕೃಷ್ಣ ಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಹಾಗೂ ಇತರರು ಇದ್ದರು.
Published on

ಹೈನುಗಾರರಿಗೆ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸಲಹೆ - ಹೊಸಕೋಟೆಯಲ್ಲಿ ಡೇರಿ ಪದಾಧಿಕಾರಿಗಳೊಂದಿಗೆ ಸಂವಾದ

ಹೊಸಕೋಟೆ: ಬಮುಲ್ ವ್ಯಾಪ್ತಿಯಲ್ಲಿ 22 ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯವಿದ್ದರೂ ಪ್ರತಿ ದಿನ ಬರೀ 15 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಸಾಮರ್ಥ್ಯಕ್ಕೆ ತಕ್ಕಂತೆ ಉತ್ಪಾದನೆ ಇದ್ದಲ್ಲಿ ಮಾತ್ರ ಲಾಭ ಹೆಚ್ಚುತ್ತದೆ. ಹಾಗಾಗಿ

ಹಾಲು ಉತ್ಪಾದನೆ ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.

ಇಲ್ಲಿನ ಶೀತಲ ಘಟಕದಲ್ಲಿ ಬಮುಲ್ ಹಾಗೂ ಹೊಸಕೋಟೆ ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳೊಂದಿಗೆ ಶನಿವಾರ ಸಂವಾದ ನಡೆಸಿದ ಡಿ.ಕೆ.ಸು, ಹೊಸಕೋಟೆ ತಾಲೂಕಿನಲ್ಲಿ 201 ಡೇರಿಗಳಿದ್ದು, ಡೇರಿ ಸಂಗ್ರಹ ಸಾಮರ್ಥ್ಯ 2 ಲಕ್ಷ ಲೀಟರ್ ಇದ್ದರೂ ಪ್ರತಿ ದಿನ ಬರೀ 1 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಗಾಗಿ ಎಲ್ಲ ನಿರ್ದೇಶಕರ ಸಭೆ ಕರೆದು ಚರ್ಚಿಸಿ, ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಮಾರುಕಟ್ಟೆ ಅಧ್ಯಯನ ನಡೆಸಿ 170ಕ್ಕೂ ವಿವಿಧ ಬಗೆಯ ಹಾಲಿನ ಪದಾರ್ಥಗಳನ್ನು ಬಮುಲ್ ಪರಿಚಯಿಸಿದೆ. ಹೆಚ್ಚಿನ ಗ್ರಾಹಕರ ಸಂಪಾದನೆಗೆ ಒತ್ತು ನೀಡಲು ಕೆಎಂಎ್ ಆಡಳಿತ ಮಂಡಳಿ ಹಾಗೂ ಕೆಎಂಎ್ ಮಾರ್ಕೆಟಿಂಗ್ ಟೀಂನೊಂದಿಗೂ ಸಭೆ ನಡೆಸಲಾಗುತ್ತಿದೆ. ಹಾಲು ಉತ್ಪಾದಕರು ಪ್ರತಿ ನಿತ್ಯ 25 ಲಕ್ಷ ಲೀ. ಹಾಲು ಸರಬರಾಜು ಮಾಡಿದರೂ ಅದಕ್ಕೆ ಉತ್ತಮ ಮಾರುಕಟ್ಟೆ ನೀಡುವ ಜವಾಬ್ದಾರಿ ನನ್ನದು ಎಂದರು.

ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ:: ಕೆಎಂಎ್ ಪಶು ಆಹಾರ ಕಳಪೆಯಾದ ಕಾರಣ ಹಾಲಿನ ಉತ್ಪಾದನೆ ಕುಂಠಿತ, ಹಸುಗಳಿಗೆ ವಿಮೆ ಮಾಡಿಸಲು ವಾರ್ಷಿಕ ಚಂದಾ 500 ರೂಪಾಯಿಯನ್ನು 700 ರೂ.ಗೆ ಹೆಚ್ಚಿಸಿದ್ದು, ಇದರ ಬದಲು ವಿಮೆಯನ್ನು ಸಂಪೂರ್ಣ ಉಚಿತಗೊಳಿಸುವುದು, ಅಲ್ಲದೇ ಹಸುಗಳು ಮೃತಪಟ್ಟರೆ ವಿಮೆ ಹಣ 6 ತಿಂಗಳ ನಂತರ ರೈತರ ಕೈ ಸೇರುತ್ತಿದ್ದು, ಇದನ್ನು 30ರಿಂದ 50 ದಿನಗಳ ಒಳಗಾಗಿ ನೀಡುವುದು, ಗ್ರಾಮಗಳಲ್ಲಿ ಕೆಎಂಎ್ ಹಾಲು ಸರಬರಾಜು ಇಲ್ಲದ ಕಾರಣ ಹೊರ ರಾಜ್ಯದ ಹಾಲಿನ ಪ್ಯಾಕೆಟ್‌ಗಳ ಮಾರಾಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಗ್ರಾಮೀಣ ಭಾಗದಲ್ಲೂ ಕೆಎಂಎ್ ಹಾಲು ಸರಬರಾಜಿಗೆ ಕ್ರಮವಹಿಸುವಂತೆ ಹೈನುಗಾರರು ಬಮುಲ್ ಅಧ್ಯಕ್ಷರ ಗಮನಕ್ಕೆ ತಂದರು. ಸಮಸ್ಯೆ ಆಲಿಸಿದ ಡಿಕೆಸು, ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸಮಸ್ಯೆ ಪರಿಹರಿಸಲಾಗುವುದು ಎಂದರು.

ಪಶು ಆಹಾರ ಘಟಕಕ್ಕೆ 20 ಎಕರೆ ಜಾಗ

ತಾಲೂಕಿನಲ್ಲಿ 8ರಿಂದ 9 ಲಕ್ಷ ಹಾಲು ಉತ್ಪಾದಕರ ಕುಟುಂಬಗಳಿದ್ದು, ಬಹುತೇಕರು ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಇಲ್ಲಿ ಬಮುಲ್‌ನಿಂದ ಪಶು ಆಹಾರ ಘಟಕ ನಿರ್ಮಿಸುವುದಾದರೆ 20 ಎಕರೆ ಜಾಗ ಮಂಜೂರು ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು. ಹೊಸಕೋಟೆ ಡೇರಿಗೆ 20 ವರ್ಷಗಳ ಹಿಂದೆಯೇ 22 ಎಕರೆ ಜಾಗವನ್ನು ಬಚ್ಚೇಗೌಡರು ಮಂಜೂರು ಮಾಡಿಸಿ, ಶೀತಲ ಘಟಕ, ಹಾಲು ಪ್ಯಾಕಿಂಗ್ ಹಾಗೂ ಪೌಡರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಹಕಾರ ನೀಡಿದ್ದರು. ಡೇರಿಯ ಇನ್ನೂ ಹೆಚ್ಚಿನ ಭೂಮಿ ಖಾಲಿ ಇದ್ದು, ಯುಎಚ್‌ಟಿ ಯೂನಿಟ್ ಸ್ಥಾಪನೆಗೆ ಬಮುಲ್ ಮುಂದಾಗಬೇಕು ಎಂದರು.

5 ನಿಮಿಷದಲ್ಲಿ ಅನುಮೋದನೆ ಸಿಕ್ಕಿತೆ?

ಅಧಿಕಾರಕ್ಕೆ ಬಂದ ಕೂಡಲೇ 5 ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮೋದನೆ ಕೊಡುತ್ತೇನೆ ಎಂದಿದ್ದ ಎಚ್‌ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದಮೇಲೆ ಏನುಮಾಡಿದ್ದಾರೆ? ಎಂದು ಮೇಕೆದಾಟು ನೀರಿನ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಡಿಕೆ ಸುರೇಶ್ ವ್ಯಂಗ್ಯವಾಡಿದರು.

ನಾನು ಬಮುಲ್ ಚುನಾವಣೆಯಲ್ಲಿ ನಿಲ್ಲಲು ಹಾಗೂ ಇಂದು ಬಮುಲ್ ಅಧ್ಯಕ್ಷನಾಗಿ ಆಯ್ಕೆಯಾಗಲು ಮೂಲ ಕಾರಣ ಶರತ್ ಬಚ್ಚೇಗೌಡ. ಅವರ ಒತ್ತಾಯದಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇನೆ. - ಡಿ.ಕೆ.ಸುರೇಶ್ ಬಮುಲ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net