ಸಿಎಂ ಸಿದ್ದು ನಡೆಯತ್ತ ಜನರ ಚಿತ್ತ

HYR cm prgm 05
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ಚಿತ್ರದುರ್ಗ ಜಿಲ್ಲೆಗೆ ಸಿದ್ದರಾಮಯ್ಯ ಅ.6ರ ಶುಕ್ರವಾರ ಮೊದಲಬಾರಿಗೆ ಭೇಟಿ ನೀಡುತ್ತಿದ್ದು ಸಹಜವಾಗಿ ಜಿಲ್ಲೆಯ ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ.

ಬಬ್ಬೂರು ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಂಭ್ರಮಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯ ಔದಾರ್ಯ ತೋರಿ ಬರಪೀಡಿತ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಜತೆಗೆ ಜ್ವಲಂತ ಸಮಸ್ಯೆಗಳಿಗೆ ವಿಶೇಷ ಅನುದಾನ ನೀಡುವರೇ ಎಂಬ ಕುತೂಹಲ ಮೂಡಿದೆ.

ಪ್ರಸಕ್ತ ವರ್ಷ ಜಿಲ್ಲೆಯ ಆರೂ ತಾಲೂಕುಗಳು ಬರದ ದವಡೆಗೆ ಸಿಲುಕಿವೆ. ಈ ಸಂಬಂಧ ಬರಪೀಡಿತ ಘೋಷಣೆಯೂ ಹೊರ ಬಿದ್ದಿದೆ.ಶೇಂಗಾ, ಕಡಲೆ, ಸೂರ್ಯಕಾಂತಿ, ಜೋಳ, ಹತ್ತಿ, ರಾಗಿ ಇತರ ಮಳೆಯಾಶ್ರಿತ ಬೆಳೆಗಳು ತೇವಾಂಶ ಕೊರತೆಯಿಂದ ಒಣಗಿವೆ. ಬೆಳೆ ನಷ್ಟ ಸಮೀಕ್ಷೆ ಮಾಡಲಾಗಿದ್ದು ಹಾನಿಯ ಪ್ರಮಾಣ ಹೆಚ್ಚಿದೆ.

ನೀರಾವರಿ, ವಸತಿ, ಕೃಷಿ, ಶುದ್ಧ ಕುಡಿವ ನೀರು, ಗುಣಮಟ್ಟದ ಆರೋಗ್ಯ ಸೇವೆ, ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ, ವಿಶೇಷ ಪ್ಯಾಕೇಜ್ ಘೋಷಿಸಬೇಕಿದೆ. ಪರಶುರಾಮಪುರ, ಧರ್ಮಪುರ ತಾಲೂಕು ರಚನೆ, ಸಮಗ್ರ ನೀರಾವರಿ ಯೋಜನೆ, ಸಕ್ಕರೆ ಕಾರ್ಖಾನೆ ಪುನಶ್ಚೇತನ, ಸಾರಿಗೆ ಡಿಪೋ, ತೋಟಗಾರಿಕೆ ವಿವಿ ಬೇಡಿಕೆಗಳು ಜೀವಂತವಾಗಿವೆ.

ವಿವಿ ಸಾಗರ, ಗಾಯತ್ರಿ ಜಲಾಶಯ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ಕೃಷಿಕರ ಆಧಾರ ಸ್ತಂಭಗಳಾಗಿವೆ. ಜಿಲ್ಲೆಯಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಿದರೆ ತೋಟಗಾರಿಕೆ ಬೆಳೆಗಳ ಸಂಶೋಧನೆ, ಬೆಳೆ ಪದ್ಧತಿಯಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಇದರಿಂದ ಬಯಲುಸೀಮೆ ರೈತರಿಗೆ ವರದಾನವಾಗಲಿವೆ. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ವಿವಿ, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಪ್ರಮುಖ ಬೇಡಿಕೆಗಳಾಗಿವೆ.

ಧರ್ಮಪುರ ಹೋಬಳಿ ಆಂಧ್ರಪ್ರದೇಶದ ಜತೆ ಗಡಿ ಹಂಚಿಕೊಂಡಿದೆ. ಕಾನೂನು ಸುವ್ಯವಸ್ಥೆಗೆ ಧರ್ಮಪುರದಲ್ಲಿ ಪೊಲೀಸ್ ಠಾಣೆ ಸ್ಥಾಪನೆ. ವಿವಿ ಸಾಗರ-ಗಾಯತ್ರಿ ಜಲಾಶಯದ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ. ನೇರ ರೈಲು ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು ಸೇರಿ ಅನೇಕ ಬೇಡಿಕೆಗಳು ಜೀವಂತವಾಗಿವೆ.

ಸ್ಪಂದನೆ ಖಚಿತ: ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಹಿರಿಯೂರಿಗೆ ಮೊದಲ ಬಾರಿ ಆಗಮಿಸುತ್ತಿರುವ ನಾಡ ದೊರೆಗೆ ಅದ್ದೂರಿ ಸ್ವಾಗತ ನೀಡಲಾಗುವುದು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ. ಬರ ಪರಿಸ್ಥಿತಿ, ರೈತ ಸಂಕಷ್ಟದ ಬಗ್ಗೆ ಅವರ ಗಮನಕ್ಕೆ ತರಲಾಗುವುದು.-ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ

ಐದು ಟಿಎಂಸಿ ಅಡಿ ನೀರಿಗೆ ಮೊರೆ: ವಿವಿ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ 5 ಟಿಎಂಸಿ ಅಡಿ ನೀರು ಮೀಸಲಿಡಲು, ಅಪ್ಪರ್ ಭದ್ರಾ ಕಾಮಗಾರಿಗೆ ವೇಗ ನೀಡಲು, ದಾವಣಗೆರೆ - ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಕಾಮಗಾರಿ ತ್ವರಿತಕ್ಕೆ ಒತ್ತಾಯಿಸಿ ರೈತ ಸಂಘದ ಮುಖಂಡರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net