ದೆಹಲಿಯತ್ತ ಜಿಲ್ಲಾ ನಾಯಕರ ಚಿತ್ತ

Published on

ಬಳ್ಳಾರಿ : ಸಂಡೂರು ಉಪಚುನಾವಣೆ ಬಿಜೆಪಿ ಸೋಲಿಗೆ ರಾಮುಲು ಎಂಬ ಆರೋಪ ಮುಕ್ತರಾಗಲು ಹಾಗೂ ರಾಜ್ಯಸಭೆ ಸ್ಥಾನ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಡಲು ಫೆ.5ಕ್ಕೆ ಮಾಜಿ ಸಚಿವ ಶ್ರೀರಾಮುಲು ದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದೆ.

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಸತತ ಸೋಲುಗಳಿಂದ ಕಂಗೆಟ್ಟಿರುವ ಮಾಜಿ ಸಚಿವ ಶ್ರೀರಾಮುಲು ಇತ್ತೀಚೆಗೆ ರಾಜ್ಯಮಟ್ಟದ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಉಪಚುನಾವಣೆ ಸೋಲಿಗೆ ತಾವೇ ಕಾರಣ ಎಂಬುದಾಗಿ ರೆಡ್ಡಿ ಆರೋಪಿಸಿದ್ದಾರೆ ಎಂಬುದಾಗಿ ರಾಮುಲು ಬಹಿರಂಗಪಡಿಸಿದ್ದರು. ಇದರಿಂದ ದಶಕಗಳ ಕಾಲ ಅಪ್ತ ಗೆಳೆಯರಾಗಿದ್ದ ರೆಡ್ಡಿ -ರಾಮುಲು ನಡುವಿನ ದೊಸ್ತಿ ಬಿರುಕು ಮೂಡಲು ಮುಖ್ಯವಾಗಿತ್ತು. ಪಕ್ಷ ಹಾಗೂ ರೆಡ್ಡಿ ವಿರುದ್ಧ ಮುನಿಸಿಕೊಂಡಿದ್ದ ರಾಮುಲು ಪಕ್ಷ ಬಿಡುವುದಾಗಿ ಎಚ್ಚರಿಸಿದ ಪರಿಣಾಮ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದೂರವಾಣಿ ಮೂಲಕ ದೆಹಲಿಗೆ ಆಹ್ವಾನಿಸಿದ್ದರು. ಸದ್ಯ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಫೆ.5ಕ್ಕೆ ಮುಕ್ತಾಯಗೊಳ್ಳಲಿದೆ. ಬಳಿಕ ಬಿಜೆಪಿಯ ಹಿರಿಯ ನಾಯಕರ ಬಳಿ ರಾಮುಲು ಮುಂದಿನ ಪಕ್ಷದಲ್ಲಿ ಉಳಿಯುವ ಬಗ್ಗೆ ನಿರ್ಧಾರ ಹಾಗೂ ಸಂಡೂರು ಚುನಾವಣೆಯ ಸೋಲಿನ ಬಗ್ಗೆ ವಿವರಿಸಲಿದ್ದಾರೆ ಎನ್ನಲಾಗಿದೆ.

ರಾಜ್ಯಸಭೆ ಸ್ಥಾನ : ಬಿಜೆಪಿಯ ನಾಯಕರ ಜತೆ ಮಾತುಕತೆ ನಡೆಸಲಿರುವ ರಾಮುಲು ರಾಜ್ಯಸಭೆ ಸ್ಥಾನದ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ನೆರೆಯ ಆಂಧ್ರದ ರಾಜ್ಯಸಭೆ ಸದಸ್ಯ ವೈಎಸ್‌ಆರ್ ಪಕ್ಷದ ವಿಜಯಸಾಯಿರೆಡ್ಡಿ ಈಚೆಗೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ತೆರವಾಗಿರುವ ಆ ಸ್ಥಾನವನ್ನು ರಾಮುಲು ವರಿಷ್ಠರ ಮುಂದೆ ಬೇಡಿಕೆ ಇಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಪುನಃ ಸಕ್ರಿಯವಾಗಿ ಕಟ್ಟುವ ಸಲುವಾಗಿ ರಾಜ್ಯಸಭೆ ಸ್ಥಾನವನ್ನು ತಮಗೆ ನೀಡಿದರೆ ಸಮುದಾಯದ ಒಲವು ದೊರೆಯಲಿದೆ ಹಾಗೂ ಪಕ್ಷ ಸಂಘಟಿಸಲು ಅನುಕೂಲವಾಗಲಿದೆ ಎಂದು ಹೈಕ್‌ಮಾಂಡ್ ಮುಂದೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ರಾಮುಲು ದೆಹಲಿಯ ಭೇಟಿ ನಂತರ ವರಿಷ್ಠರು ಯಾವೆಲ್ಲ ಬೇಡಿಕೆಗಳನ್ನು ಈಡೇರಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

ದೆಹಲಿಯಲ್ಲಿ ನಾಗೇಂದ್ರ : ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಲ ತಿಂಗಳಲ್ಲೇ ವರ್ಷ ಕಳೆಯಲಿದೆ. ಹಗರಣದ ಆರೋಪ ಹೊತ್ತು ಜೈಲು ಸೇರಿ ಜಾಮೀನು ಬಳಿಕ ಹೊರಬಂದ ಸಚಿವ ಸ್ಥಾನ ನೀಡುವ ನಿರೀಕ್ಷೆಯಿತ್ತು. ಆ ಸಂದರ್ಭದಲ್ಲಿಯೇ ಉಪ ಚುನಾವಣೆ ಘೋಷಣೆಯಾಗಿದ್ದರಿಂದ ಪಕ್ಷಕ್ಕೆ ಹೊಡೆತೆ ನೀಡಲಿದೆ ಎಂಬ ಉದ್ದೇಶದಿಂದ ಸಚಿವ ಸ್ಥಾನ ನೀಡುವುದನ್ನು ರಾಜ್ಯ ನಾಯಕರು ತಡೆಹಿಡಿದರು. ಸಂಡೂರು ಚುನಾವಣೆಯ ಪ್ರಚಾರ ಹಾಗೂ ಸಮುದಾಯದ ಸಭೆಯೊಂದರಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ನಾಗೇಂದ್ರ ಸಚಿವ ಸ್ಥಾನ ನೀಡುವುದಾಗಿ ಹೇಳಿ ಮೂರ‌್ನಾಲ್ಕು ತಿಂಗಳು ಕಳೆದರೂ ಈವರೆಗೂ ಯಾವುದೇ ಸಚಿವ ಸ್ಥಾನ ನೀಡಿಲ್ಲ. ಆದ್ದರಿಂದ, ರಾಜ್ಯ ನಾಯಕರನ್ನು ನಂಬಿ ಕೂತರೆ ಮರಳಿ ಸ್ಥಾನ ಸಿಗುವುದಿಲ್ಲ ಎಂಬ ಅರಿತ ನಾಗೇಂದ್ರ ದೆಹಲಿಯಲ್ಲಿ ಎರಡ್ಮೂರು ದಿನ ಠಿಕಾಣಿ ಹೂಡಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ್, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಲಾಬಿ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿದವು. ಒಟ್ಟಾರೆ ಒಂದೇ ಕ್ಷೇತ್ರದ ಹಾಗೂ ಒಂದೇ ಸಮುದಾಯದ ಇಬ್ಬರು ನಾಯಕರು ಮರಳಿ ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯಲು ದೆಹಲಿಯ ನಾಯಕರ ಜತೆ ಚರ್ಚಿಸಿದ್ದಾರೆೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net