ಹಿಂಗಾರು ಮಳೆ ಪ್ರವೇಶ ನಾಳೆ

monsoon rains
Published on

ಬೆಂಗಳೂರು: ಪ್ರಸಕ್ತ ವರ್ಷದ ಮುಂಗಾರು ಮಳೆ ಬುಧವಾರ ಕೊನೆಗೊಂಡಿದ್ದು, ಗುರುವಾರದಿಂದ (ಅ.16) ಹಿಂಗಾರು ಮಳೆ ರಾಜ್ಯ ಪ್ರವೇಶಿಸಲಿದೆ.

ಈ ಬಾರಿ ಹಿಂಗಾರು ಅವಧಿ ನವೆಂಬರ್ ತಿಂಗಳಾಂತ್ಯದವರೆಗೆ ಇರಲಿದ್ದು, ವಾಡಿಕೆಯಷ್ಟೇ ಮಳೆ ಸುರಿಯಲಿದೆ. ಹೆಚ್ಚಿನ ವರ್ಷಧಾರೆ ಅಥವಾ ಪ್ರವಾಹಕ್ಕೆ ಆಸ್ಪದ ನೀಡುವಷ್ಟು ಮಳೆಯಾಗದು. ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಸೀಮಿತವಾಗಿ ಹಿಂಗಾರು ಆವರಿಸಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮುಂಗಾರು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಳ್ಳುತ್ತದೆ. ಆದರೆ, ಈ ಬಾರಿ ಬದಲಾದ ಹವಾಮಾನದಿಂದಾಗಿ ಮುಂಗಾರು ಅವಧಿ 15 ದಿನಗಳ ಕಾಲ ವಿಸ್ತರಣೆಯಾಗಿತ್ತು. ಕೊನೆಯ ಚರಣದಲ್ಲಿ ಹೆಚ್ಚಿನ ವರ್ಷಧಾರೆಯಿಂದಾಗಿ ಕೊರತೆ ಎದುರಿಸುತ್ತಿದ್ದ ಕೆಲ ಜಿಲ್ಲೆಗಳಲ್ಲಿ ಸಮಸ್ಯೆಯನ್ನು ದೂರಮಾಡಿದೆ. ಅದರಲ್ಲೂ ಮಳೆ ಕೊರತೆ ಕಾಣಿಸಿಕೊಂಡಿದ್ದು, ಕೋಲಾರ, ರಾಮನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ.

ಗುರುವಾರ ಹಾಗೂ ಶುಕ್ರವಾರ ಗುಡುಗು ಸಹಿತ ಹೆಚ್ಚು ಮಳೆಯಾಗಲಿರುವ ಹಿನ್ನೆಲೆ ಮಲೆನಾಡು ಹಾಗೂ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಒಣಹವೆ ಮುಂದುವರಿಯಲಿದೆ.

ವಿಸ್ತರಣೆ ಅವಧಿಯಲ್ಲಿ ಕಾಡಿದ ಕೊರತೆ:

ಮುಂಗಾರು ಮಳೆ ವಿಸ್ತರಣೆಯಾಗಿದ್ದ ಅವಧಿಯಲ್ಲಿ (ಅ.1ರಿಂದ 15) ಹಳೇ ಮೈಸೂರು ಭಾಗಲ್ಲಿ ಚಿತ್ರದುರ್ಗ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ವಾಡಿಕೆ ಅಥವಾ ಹೆಚ್ಚು ವರ್ಷಧಾರೆಯಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಶಿವಮೊಗ್ಗ, ಕೊಡಗು ಹಾಗೂ ಕರಾವಳಿಯ ಮೂರೂ ಜಿಲ್ಲೆಗಳಲ್ಲೂ ಕೊರತೆ ಕಂಡಿದೆ. ಇನ್ನು, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ಕಾಣಿಸಿಕೊಂಡಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಅ.1-15ರವರೆಗೆ ಮಳೆ ವಿವರ:

ಮಳೆ ಪ್ರದೇಶ ವಾಡಿಕೆ ವಾಸ್ತವ ವ್ಯತ್ಯಾಸ

ದಕ್ಷಿಣ ಒಳನಾಡು 79 88 ಶೇ.+12

ಉತ್ತರ ಒಳನಾಡು 70 20 ಶೇ.-71

ಮಲೆನಾಡು 91 71 ಶೇ.-22

ಕರಾವಳಿ 115 64 ಶೇ.-44

ಸರಾಸರಿ 80 52 ಶೇ.-35

(ಅಂಕಿ-ಅಂಶ ಮಿ.ಮೀ.ಗಳಲ್ಲಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net