ಅನ್ನದಾತರಿಗೆ ಆತಂಕ ತಂದೊಡ್ಡಿದ ಹಿಂಗಾರು

RAIN 4
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 30;
Published on

ಮೈಸೂರು: ಜಿಲ್ಲೆಯಲ್ಲಿ ಮುಂಗಾರು ವಾಡಿಕೆಗಿಂತ ಕಡಿಮೆ ಸುರಿದರೂ ಹಿಂಗಾರು ಆರ್ಭಟಿಸುತ್ತಿದ್ದು, ಶೇ.56 ರಷ್ಟು ಹೆಚ್ಚು ಮಳೆ ಸುರಿದಿದೆ. ಆಗಿಂದಾಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದು ರೈತರಲ್ಲಿ ಆತಂಕ ಕವಿಯುವಂತೆ ಮಾಡಿದೆ.

ಜಿಲ್ಲೆಯಲ್ಲಿ ಬಹುಪಾಲು ರೈತರು ಮುಂಗಾರು ಮಳೆಯನ್ನು ನಂಬಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಾರೆ. ಹಾಗಾಗಿ ಹಿಂಗಾರು ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದರೆ ಹಾಗೂ ಮೋಡ ಕವಿದ ವಾತಾವರಣ ಕಾಣಿಸಿಕೊಂಡರೆ ಭತ್ತದ ಬೆಳೆಗೆ ಬೆಂಕಿ ರೋಗ ಹಾಗೂ ನುಸಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಬಾಳೆ, ಅಡಿಕೆ, ತೆಂಗು ಹಾಗೂ ತರಕಾರಿ ಬೆಳೆಗಳಿಗೆ ಮಳೆಯಿಂದ ಹಾನಿಯಾಗುವ ಆತಂಕವನ್ನು ರೈತಾಪಿ ವರ್ಗದವರು ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ (ಜೂನ್ 1 ರಿಂದ ಸೆಪ್ಟೆಂಬರ್ 30ರವರೆಗೆ) 419 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ, 324 ಮಿ.ಮೀ.ಮಳೆ ಮಾತ್ರ ಸುರಿದಿದ್ದು, ಶೇ.23 ರಷ್ಟು ಮಳೆ ಕೊರತೆ ಕಂಡು ಬಂದಿದೆ. ಹಿಂಗಾರು ಅವಧಿಯಲ್ಲಿ (ಅ.1 ರಿಂದ) 114 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ, ವಾಡಿಕೆಗಿಂತ ಹೆಚ್ಚು ಮಳೆ (179 ಮಿ.ಮೀ.) ಶೇ.56 ರಷ್ಟು ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವಾಡಿಕೆಗಿಂತ ಕಡಿಮೆ ಸುರಿದರೂ ಬೇಸಿಗೆ ಮಳೆ ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜನವರಿ 1 ರಿಂದ ಅ.24ರವರೆಗೆ ವಾಡಿಕೆಗಿಂತ ಶೇ.7 ರಷ್ಟು ಹೆಚ್ಚು ಮಳೆ ಸುರಿದಿದೆ. ಈ ಅವಧಿಯಲ್ಲಿ 738 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, 788 ಮಿ.ಮೀ. ಮಳೆ ಸುರಿದಿದೆ.

ಹಿಂಗಾರು ಮಳೆ ವಿವರ: ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ಎಲ್ಲ ತಾಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ 100.9 ಮಿ.ಮೀ. ವಾಡಿಕೆ, 163.2 ಮಿ.ಮೀ. ವಾಸ್ತವಿಕ (ಶೇ.62) ಹೆಚ್ಚು ಮಳೆ ಸುರಿದಿದೆ. ಅದೇ ರೀತಿ ಹುಣಸೂರು ತಾಲೂಕಿನಲ್ಲಿ 126.3 ಮಿ.ಮೀ. ವಾಡಿಕೆ, 156.6 ಮಿ.ಮೀ. ವಾಸ್ತವಿಕ (ಶೇ.24), ಕೆ.ಆರ್. ನಗರ ತಾಲೂಕಿನಲ್ಲಿ 129.8 ಮಿ.ಮೀ. ವಾಡಿಕೆ, 263.3 ಮಿ.ಮೀ. ವಾಸ್ತವಿಕ (ಶೇ.103), ಮೈಸೂರು ತಾಲೂಕಿನಲ್ಲಿ 121 ಮಿ.ಮೀ. ವಾಡಿಕೆ, 191.3 ಮಿ.ಮೀ. ವಾಸ್ತವಿಕ (ಶೇ.58), ನಂಜನಗೂಡು ತಾಲೂಕಿನಲ್ಲಿ 107.3 ಮಿ.ಮೀ. ವಾಡಿಕೆ, 161.9 ಮಿ.ಮೀ. ವಾಸ್ತವಿಕ (ಶೇ.51), ಪಿರಿಯಾಪಟ್ಟಣದಲ್ಲಿ 113.3 ಮಿ.ಮೀ. ವಾಡಿಕೆ, 169.7 ಮಿ.ಮೀ. ವಾಸ್ತವಿಕ (ಶೇ.50), ತಿ.ನರಸೀಪುರ ತಾಲೂಕಿನಲ್ಲಿ 117.4 ಮಿ.ಮೀ. ವಾಡಿಕೆ, 221.2 ಮಿ.ಮೀ. ವಾಸ್ತವಿಕ (ಶೇ.88), ಸರಗೂರು ತಾಲೂಕಿನಲ್ಲಿ 101.5 ಮಿ.ಮೀ. ವಾಡಿಕೆ, 118.4 ಮಿ.ಮೀ. ವಾಸ್ತವಿಕ (ಶೇ.17), ಸಾಲಿಗ್ರಾಮ 119.1 ಮಿ.ಮೀ. ವಾಡಿಕೆ, 284.2 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ.139 ರಷ್ಟು ಹೆಚ್ಚು ಮಳೆಯಾಗಿದೆ.

ಮುಂಗಾರಿನಲ್ಲಿ ಕೊರತೆ: ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ 409.2 ಮಿ.ಮೀ. ವಾಡಿಕೆ, 514.4 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ.26 ರಷ್ಟು ಹೆಚ್ಚು ಮಳೆ ಸುರಿದಿದೆ. ಆದರೆ, ಉಳಿದ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹುಣಸೂರು ತಾಲೂಕಿನಲ್ಲಿ 369.2 ಮಿ.ಮೀ. ವಾಡಿಕೆ, 252.9 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ.32 ರಷ್ಟು ಮಳೆ ಕೊರತೆ ಕಂಡು ಬಂದಿದೆ. ಅದೇ ರೀತಿ ಕೆ.ಆರ್. ನಗರ ತಾಲೂಕಿನಲ್ಲಿ 321.4 ಮಿ.ಮೀ. ವಾಡಿಕೆ, 203.9 ಮಿ.ಮೀ. ವಾಸ್ತವಿಕ (ಶೇ.37), ಮೈಸೂರು ತಾಲೂಕಿನಲ್ಲಿ 353.6 ಮಿ.ಮೀ. ವಾಡಿಕೆ, 256 ಮಿ.ಮೀ. ವಾಸ್ತವಿಕ (ಶೇ.28), ನಂಜನಗೂಡು ತಾಲೂಕಿನಲ್ಲಿ 322 ಮಿ. ಮೀ. ವಾಡಿಕೆ, 289.6 ಮಿ.ಮೀ. ವಾಸ್ತವಿಕ (ಶೇ.10), ಪಿರಿಯಾಪಟ್ಟಣ ತಾಲೂಕಿನಲ್ಲಿ 436.8 ಮಿ.ಮೀ. ವಾಡಿಕೆ, 318 ಮಿ.ಮೀ. ವಾಸ್ತವಿಕ (ಶೇ.27), ತಿ.ನರಸೀಪುರ ತಾಲೂಕಿನಲ್ಲಿ 337.8 ಮಿ.ಮೀ. ವಾಡಿಕೆ, 313 ಮಿ.ಮೀ. ವಾಸ್ತವಿಕ (ಶೇ.7), ಸರಗೂರು ತಾಲೂಕಿನಲ್ಲಿ 492.1 ಮಿ.ಮೀ. ವಾಡಿಕೆ, 401.9 ಮಿ.ಮೀ. ವಾಸ್ತವಿಕ (ಶೇ.18), ಸಾಲಿಗ್ರಾಮ ತಾಲೂಕಿನಲ್ಲಿ 288.2 ಮಿ.ಮೀ. ವಾಡಿಕೆ, 200.7 ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ.30 ರಷ್ಟು ಮಳೆ ಕೊರತೆ ಕಂಡು ಬಂದಿದೆ.

ಕಬಿನಿ ಒಳಹರಿವು ಹೆಚ್ಚಳ: ಹಿಂಗಾರು ಮಳೆಯ ಆರ್ಭಟದಿಂದ ಜಿಲ್ಲೆಯ ಎಚ್.ಡಿ. ಕೋಟೆಯ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಪ್ರತಿದಿನ ಹೆಚ್ಚುತ್ತಿದೆ. ಜಲಾಶಯಕ್ಕೆ ಬುಧವಾರ 2353 ಕ್ಯೂಸೆಕ್, ಗುರುವಾರ 4835 ಕ್ಯೂಸೆಕ್, ಶುಕ್ರವಾರ 5427 ಕ್ಯೂಸೆಕ್ ನೀರು ಹರಿದು ಬಂದಿದ್ದು, ಜಲಾಶಯದಿಂದ ನದಿಗೆ 5,000 ಕ್ಯೂಸೆಕ್ ನೀರು ಹರಿಯ ಬಿಡಲಾಗುತ್ತಿದೆ. 2284.96 ಅಡಿಗಳಷ್ಟು ನೀರಿನ ಸಂಗ್ರಹಣ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2283.96 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಜಿಲ್ಲೆಯಲ್ಲಿ ಹಿಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗುವ ಸಾಧ್ಯತೆ ಇದೆ. ಭಾರಿ ಮಳೆಯಿಂದ ಹೊಲದಲ್ಲಿ ನೀರು ನಿಂತು ಭತ್ತ ಹಾಗೂ ತರಕಾರಿ ಬೆಳೆಗಳಿಗೆ ಹಾನಿಯಾಗಲಿದೆ. ಭತ್ತಕ್ಕೆ ರೋಗ ಬೆಂಕಿರೋಗ, ನುಸಿರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇದೆ. ಈಗಾಗಲೇ ಹಲವು ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಈ ಮಳೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಆತಂಕ ಇದೆ.

ಅತ್ತಹಳ್ಳಿ ದೇವರಾಜ್, ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net