

ಹುಣಸೂರು : ನಗರೋತ್ಥಾನ ಯೋಜನೆಯ ಮೊದಲನೇ ಹಂತದ ಕಾಮಗಾರಿಗಳು 14 ತಿಂಗಳಾದರೂ ಪೂರ್ಣಗೊಂಡಿಲ್ಲ. ನಾಗರಿಕರು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. 45 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾದಿಕಾರಿಗೆ ಶಿಫಾರಸು ಮಾಡುತ್ತೇನೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಎಚ್ಚರಿಸಿದರು.
ನಗರಸಭೆಯ ಸಭಾಂಗಣದಲ್ಲಿ ಸೋಮವಾರ ನಗರಸಭೆ ಅಧಿಕಾರಿಗಳು ಮತ್ತು ನಗರೋತ್ಥಾನ ಯೋಜನೆಯ ಮೊದಲ ಹಂತದ ಕಾಮಗಾರಿಯ ಗುತ್ತಿಗೆ ಪಡೆದಿರುವ ಕೆಟಿಆರ್ ಕನ್‌ಸ್ಟ್ರಕ್ಷನ್ಸ್‌ನ ಸಿಬ್ಬಂದಿಯೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
10 ಕೋಟಿ ರೂ. ವೆಚ್ಚದಡಿ ನಗರದಲ್ಲಿ ಒಟ್ಟು 325 ಕಾಮಗಾರಿಗಳನ್ನು ಕೆಟಿಆರ್ ಕನ್‌ಸ್ಟ್ರಕ್ಷನ್ಸ್‌ಗೆ ನೀಡಲಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ. 14 ತಿಂಗಳುಗಳೇ ಕಳೆದರೂ ಕಾಮಗಾರಿ ಶೇ.20ರಷ್ಟು ಕೂಡ ಪ್ರಗತಿಯಾಗಿಲ್ಲ. ಮೈಸೂರು ಜಿಲ್ಲೆಯ ಇನ್ನಿತರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆ ಜಾರಿಗೊಂಡು ಕಾಮಗಾರಿ ಪೂರ್ಣಗೊಂಡಿವೆ. ಆದರೆ ಹುಣಸೂರಿನಲ್ಲಿ ಮಾತ್ರ ಏಕೆ ಮಾಡಿಲ್ಲ? ನಿಮಗೆ ನಗರಸಭೆ ಅಧಿಕಾರಿಗಳ ಸಹಕಾರ ಸಿಗುತ್ತಿಲ್ಲವೇ? ನಿಮ್ಮದೇ ಆದ ಸಮಸ್ಯೆ ಇದೆಯೇ? ವಿಳಂಬಕ್ಕೆ ಕಾರಣವೇನು ತಿಳಿಸಿ ಎಂದು ಸಭೆಯಲ್ಲಿ ಹಾಜರಿದ್ದ ಪ್ರಾಜೆಕ್ಟ್ ಇನ್ಸ್‌ಪೆಕ್ಟರ್ ತೇಜಸ್‌ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತನಾಡಿದ ತೇಜಸ್, ಕಾಮಗಾರಿ ಕೈಗೊಳ್ಳುವ ರಸ್ತೆಗಳ ಕ್ಲಿಯರೆನ್ಸ್ ಅನ್ನು ನಗರಸಭೆ ಮಾಡಿಕೊಡುತ್ತಿಲ್ಲ. ಹಾಗಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ದೂರಿದಾಗ, 325 ಕಾಮಗಾರಿಗಳಲ್ಲಿ ಎಷ್ಟು ಕಾಮಗಾರಿಗಳಲ್ಲಿ ಇಂತಹ ಅಡೆತಡೆಗಳಿವೆ ಎಂದು ಶಾಸಕರು ಕೇಳಿದಾಗಿ ತೇಜಸ್ ಮೌನಕ್ಕೆ ಶರಣಾದರು. ನೀವು ಒಂದು ಬ್ಯಾಚ್ ಕಾರ್ಮಿಕರನ್ನು ಹಿಡಿದುಕೊಂಡು ಯಾವ ಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಪಿಎಂಸಿ ಏನು ಮಾಡುತ್ತಿದೆ?
ಯೋಜನೆಯ ಸಮಗ್ರ ನಿರ್ವಹಣೆ ಮತ್ತು ಪರಿಶೀಲನೆ ನಡೆಸುವ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ ತಂಡ ಏನು ಮಾಡುತ್ತಿದೆ ಎಂದು ತಂಡದ ಮುಖ್ಯಸ್ಥ ಚೇತನ್‌ರನ್ನು ಶಾಸಕ ಪ್ರಶ್ನಿಸಿದಾಗ, ಈಗಾಗಲೇ ಗುತ್ತಿಗೆದಾರನಿಗೆ 8 ಬಾರಿ ನೋಟಿಸ್ ನೀಡಲಾಗಿದೆ. ಮಾತ್ರವಲ್ಲದೇ ದಂಡಶುಲ್ಕ ವಿಧಿಸಲು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
45 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಿರಿ:
ಜು.17 ರೊಳಗೆ ಶೇ.75ರಷ್ಟು ಕಾಮಗಾರಿ ಪೂರ್ಣಗೊಳಿಸಿರಬೇಕು. ಅಂದು ಮತ್ತೆ ಸಭೆ ಆಯೋಜಿಸಲು ಪೌರಾಯುಕ್ತರಿಗೆ ಸೂಚಿಸಿದ್ದೇನೆ. ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದರೆ ಬಾಕಿ ಇರುವ ಕಾಮಗಾರಿ ನಡೆಸಲು ಅನುಮತಿ ನೀಡಲಾಗುವುದು. ಇಲ್ಲದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಿ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು. ಬಾಕಿ ಉಳಿದಿರುವ ಕಾವಗಾರಿಯನ್ನು ಮರುಟೆಂಡರ್ ಕರೆದು ಬೇರೊಬ್ಬರಿಗೆ ಗುತ್ತಿಗೆ ನೀಡಲಾಗುವುದು ಎಂದು ಎಚ್ಚರಿಸಿದರು.
ಈ ನಡುವೆ ನಗರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಸೂಚಿಸಿರುವ ರಸ್ತೆಗಳಲ್ಲಿ ರೋಡ್ ಕ್ಲಿಯರೆನ್ಸ್ ಕಾಮಗಾರಿ ಬಾಕಿ ಇರುವ ರಸ್ತೆಗಳನ್ನು ಗುರುತಿಸಿ ಕೂಡಲೇ ಕಾಮಗಾರಿ ನಡೆಸಿ. ನಗರೋತ್ಥಾನ ಯೋಜನೆಯ ಕಾಮಗಾರಿ ಸುಲಲಿತವಾಗಿ ನಡೆಯುವಂತೆ ಕ್ರಮವಹಿಸಬೇಕೆಂದು ನಗರಸಭೆ ಇಂಜಿನಿಯರ್ ಶಮಂತ್‌ಗೆ ಶಾಸಕ ಹರೀಶ್ ಗೌಡ ಸೂಚಿಸಿದರು.
ಅಮೃತ್ 2.0 ಕಾಮಗಾರಿಗೆ ಸರ್ವೇ
ಈ ವೇಳೆ ಮಾತನಾಡಿದ ಪೌರಾಯುಕ್ತೆ ಕೆ.ಎಂ.ಮಾನಸಾ, ಜು.18ರಂದು ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆಯಡಿ ಮನೆಮನೆಗೆ ನಲ್ಲಿಯ ಮೂಲಕ ಕಾವೇರಿ ನೀರು ಸರಬರಾಜು ಮತ್ತು ಮೀಟರ್ ಅಳವಡಿಕೆ ಕಾಮಗಾರಿಗೆ 20 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕುಡಿಯುವ ನೀರು ಸರಬರಾಜು ವಿತರಣಾ ಕೊಳವೆ ಜಾಲ ಹಾಗೂ ಗೃಹಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಗ್ರಾಹಕ ಸಮೀಕ್ಷೆ ಕೈಗೆತ್ತಿಕೊಳ್ಳಲಿದ್ದು, ಸಮೀಕ್ಷಾಕಾರರು ಮನೆ ಮನೆ ಭೇಟಿ ನೀಡಿದ ವೇಳೆ ಗ್ರಾಹಕರು ಆಧಾರ್ ಕಾರ್ಡ್, ಎಲೆಕ್ಟ್ರಿಕ್ ಮೀಟರ್ ನಂಬರ್ ಮತ್ತು ಫೋನ್ ನಂಬರ್‌ಗಳನ್ನು ನೀಡುವ ಮೂಲಕ ಯೋಜನೆಯ ಯಶಸ್ವಿ ಜಾರಿಗೆ ಸಹಕರಿಸಬೇಕೆಂದು ಕೋರಿದರು.
ಸಭೆಯಲ್ಲಿ ಎಇಇ ಶರ್ಮಿಳಾ, ನಗರಸಭೆ ಸದಸ್ಯರಾದ ಕೃಷ್ಣರಾಜಗುಪ್ತ, ಸತೀಶ್‌ಕುಮಾರ್, ವಿವೇಕಾನಂದ , ಪರಿಸರ ಇಂಜಿನಿಯರ್ ಎಲ್.ರೂಪಾ ಸೆೇರಿದಂತೆ ನಗರಸಭೆ ಸಿಬ್ಬಂದಿ ಹಾಜರಿದ್ದರು.
ಶಾಸಕರ ಗಮನಸೆಳೆದ ವಿಜಯವಾಣಿ ಲೌಡ್‌ಸ್ಪೀಕರ್
ಜೂ.4ರಂದು ವಿಜಯವಾಣಿ ಪತ್ರಿಕೆಯ ಲೌಡ್‌ಸ್ಪೀಕರ್‌ನಲ್ಲಿ ‘ಹುಣಸೂರಿನಲ್ಲಿಲ್ಲ ಸುಸಜ್ಜಿತ ರಸ್ತೆ’ ಶೀರ್ಷಿಕೆಯಡಿ ಪ್ರಕಟಗೊಂಡ ವಿಶೇಷ ವರದಿಯ ಪತ್ರಿಕೆಯನ್ನು ನಾಗರಿಕರೊಬ್ಬರು ಶಾಸಕರಿಗೆ ನೀಡಿ ಗಮನಸೆಳೆದರು. ವರದಿಯನ್ನು ಈಗಾಗಲೇ ನೋಡಿದ್ದು, ಪತ್ರಿಕಾ ವರದಿ ಮತ್ತು ಜನಪ್ರತಿನಿಧಿಗಳ ದೂರುಗಳ ಸುರಿಮಳೆ ಗಮನಿಸಿಯೇ ಸಭೆ ಆಯೋಜಿಸಿದ್ದೇನೆ. ಪತ್ರಿಕೆ ಪರಿಣಾಮಕಾರಿಯಾಗಿ ವರದಿ ಮಾಡಿದೆ ಎಂದು ಶ್ಲಾಘಿಸಿದರು.