

ಜಮಖಂಡಿ: ಸರ್ಕಾರಿ ಆಸ್ಪತ್ರೆಗೆ ಬಡವರೆ ಹೆಚ್ಚಾಗಿ ಬರುತ್ತಾರೆ. ಅವರೊಂದಿಗೆ ಸರಿಯಾಗಿ ವರ್ತನೆ ಮಾಡಿ. ಅದು ಬಿಟ್ಟು ನೀವು ಅನಾಗರಿಕರಂತೆ ವರ್ತಿಸಿದರೆ ಹೇಗೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗೆ ವೈದ್ಯಾಧಿಕಾರಿಗಳಿಗೆ ಸರಿಯಾಗಿ ನಿರ್ವಹಣೆ ಮಾಡಬೇಕು. ಅದು ಬಿಟ್ಟು ಕುಂಟು ನೇಪ ಹೇಳಿದರೆ ಸಾಲದು. ನೀವು ಸರಿಯಾಗಿ ಕಾರ್ಯ ಮಾಡದೆ ಇರುವುದರಿಂದ ನಾವು ಜನರಿಂದ ಅನಿಸಿಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಐತಿಹಾಸಿಕ ಆಸ್ಪತ್ರೆ ಸಂಪೂರ್ಣ ಹದಗೆಟ್ಟಿದೆ. ವೈದ್ಯರು ಎಂದರೆ ಜೀವ ರಕ್ಷಕರು. ವೈದ್ಯರು ತಾಯಿ ಹೃದಯಿಗಳು, ಆದರೆ, ನೀವು ಜನರ ಜತೆಗೆ ಸರಿಯಾಗಿ ವರ್ತನೆ ಮಾಡಿ ಚಿಕಿತ್ಸೆ ನೀಡಿದರೆ ಅವರು ಶೀಘ್ರ ಗುಣಮುಖರಾಗುತ್ತಾರೆ. ಆದರೆ ನೀವೇ ಅವರೊಂದಿಗೆ ಅನಾಗರಿಕರಂತೆ ವರ್ತಿಸಿದರೆ ನಿಮ್ಮ ಅಯೋಗ್ಯತನ ತೋರಿದಂತಾಗುತ್ತದೆ. ನಿಮ್ಮ ವರ್ತನೆ ಬದಲಾಯಿಸಿಕೊಳ್ಳಿ ಎಂದು ವೈದ್ಯರಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ನಾನು ಆ ಸಮಸ್ಯೆಗೆ ಸಂಬಂಧಪಟ್ಟವರಿಗೆ ಮುಟ್ಟಿಸಿ ಪರಿಹಾರ ಕಂಡುಕೊಳ್ಳೋಣ. ಅದು ಬಿಟ್ಟು ತಾವು ಯಾವುದೇ ಮಾಹಿತಿ ನೀಡದೆ ಇದ್ದರೆ ಹೇಗೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ವಿ.ಸಿ.ಮುದಿಗೌಡರ ಅವರನ್ನು ಪ್ರಶ್ನಿಸಿದರು.
ಹೆರಿಗೆಗೆಂದು ಬರುವ ರೋಗಿಗಳನ್ನು ವಿನಾಕಾರಣ ಹೊರಗಡೆ ಕಳುಹಿಸುವುದನ್ನು ನಿಲ್ಲಿಸಬೇಕು. ಔಷಧ ಚಿಟಿಗಳನ್ನು ಹೊರಗಡೆ ಬರೆದು ಕೊಡಬೇಡಿ. ರೋಗಿಗಳು ಏನಾದರು ಕೇಳಿದರೆ ಅದಕ್ಕೆ ಸರಿಯಾಗಿ ಮಾಹಿತಿ ನೀಡಿ ಎಂದು ಸೂಚಿಸಿದರು.
ಜೀವ ಉಳಿಸುವ ವೈದ್ಯ ವೃತ್ತಿ ಬಹಳ ಪವಿತ್ರ. ಸೌಜನ್ಯದಿಂದ ವರ್ತಿಸಿದರೆ ರೋಗಿಗಳ ಅರ್ಧ ರೋಗವೇ ಕಡಿಮೆಯಾಗುತ್ತದೆ. ಉತ್ತಮ ಸಂಪರ್ಕ ಕೌಶಲದಿಂದ ಜನರೊಂದಿಗೆ ವ್ಯವಹರಿಸಿ ಎಂದರು.
ಅಜಯ ಕಡಪಟ್ಟಿ, ರಾಜೇಸಾಬ ಕಡಕೋಳ, ಗಣೇಶ ಶಿರಗಣ್ಣವರ, ರಾಜು ಚಿಕನಾಳ ಇತರರು ಇದ್ದರು.