

ಕೆ.ಆರ್.ಪೇಟೆ: ಕಾಲುವೆ ಕೊನೆಯ ಭಾಗಕ್ಕೆ ನೀರು ಹರಿಸದ ಮತ್ತು ಕೆರೆಗಳಿಗೆ ನೀರು ತುಂಬಿಸದ ನೀರಾವರಿ ಇಲಾಖೆ ಅಧಿಕಾರಿಗಳನ್ನು ಶಾಸಕ ಎಚ್.ಟಿ.ಮಂಜು ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಗುಡ್ಡೇನಹಳ್ಳಿ, ವಿಠಲಾಪುರ, ಮಡುವಿನಕೋಡಿ, ಯಗಚಗುಪ್ಪೆ, ಹೊಸಕೋಟೆ, ಕತ್ತರಘಟ್ಟ ಸೇರಿದಂತೆ ಹಲವು ಗ್ರಾಮಗಳ ನಾಲಾ ಏರಿ ಮೇಲೆ ಗೊರೂರು ಜಲಾಶಯದ ಮುಖ್ಯ ಅಧೀಕ್ಷಕ ಇಂಜಿನಿಯರ್ ಮಂಜುನಾಥ್, ಎಸ್.ಇ.ಕಿಶೋರ್, ಇ.ಇ.ಆನಂದ್, ಎ.ಇ.ಇ,ವಿಶ್ವನಾಥ್, ಸುಧಾ, ಎ.ಇ.ರಾಘವೇಂದ್ರ, ಜೆ.ಇ.ಗಳಾದ ಮೋಹನ್, ಮಹೇಶ್ ಒಳಗೊಂಡಂತೆ ಹಲವು ಅಧಿಕಾರಿಗಳೊಂದಿಗೆ ಸಂಚಾರ ಮಾಡಿ ಕಾಲುವೆಗಳ ಹೂಳು ತೆಗೆಸಿ ಕೊನೆಯ ಭಾಗಕ್ಕೆ ನೀರು ಹರಿಸದಿರುವುದು ಮತ್ತು ಕಾಲುವೆಗಳಿಗೆ ನೀರು ಬಿಟ್ಟು ಮೂರು ತಿಂಗಳಾದಾರೂ ಇನ್ನೂ ಹಲವಾರು ಕೆರೆಗಳಿಗೆ ನೀರು ತುಂಬಿಸದಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾಲಾ ಬಯಲಿನಲ್ಲಿ ಎಲ್ಲೂ ಹೂಳು ತೆಗೆದಿರುವುದು ಕಂಡುಬರಲಿಲ್ಲ. ಇದನ್ನು ಕಂಡ ಶಾಸಕರು ನಿಮ್ಮ ಬೇಜವಾಬ್ದಾರಿತನಕ್ಕೆ ರೈತರು ಬಲಿಯಾಗಬೇಕಿದೆ. ಬೆಳೆಗಳಿಗೆ ಹಾಕಿದ ಬಂಡವಾಳ ಕೂಡ ರೈತರಿಗೆ ಸಿಗದಂತಾಗಿದೆ. ಶಾಸಕನಾಗಿ ರೈತರಿಗೆ ಏನು ಉತ್ತರ ನೀಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೂಳು ತೆಗೆಯದಿರುವುದರಿಂದ ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಸಾಧ್ಯಾವಾಗದೆ ಕೊನೆಯ ಭಾಗಕ್ಕೆ ನೀರು ಹರಿಯುತ್ತಿಲ್ಲ. ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದೆ ಎಂದು ಸ್ಥಳದಲ್ಲಿದ್ದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೂಳು ಮತ್ತು ಜಂಗಲ್ ತೆಗೆಯದಿರುವುದನ್ನು ಕಣ್ಣಾರೆ ಕಂಡ ಸಿ.ಇ.ಮಂಜುನಾಥ್ ಕೂಡಲೇ ಎರಡು ಮೂರು ದಿನಗಳ ಕಾಲ ನೀರು ನಿಲ್ಲಿಸಿ ಹೂಳು ತೆಗೆಸಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡದರು.
ಬಿಲ್ ಪಾವತಿಸಬೇಡಿ: ಕಾಮಗಾರಿ ವೀಕ್ಷಿಸಿದ ಸಿ.ಇ.ಮಂಜುನಾಥ್ ಎಲ್ಲೂ ಕೂಡ ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ನಡೆಸಿದಿರುವುದು ಕಂಡು ಬಂದ ಹಿನ್ನೆಲೆ ಮುಂದಿನ ಆದೇಶದವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ನಿರ್ದೇಶನ ನೀಡಿದರು.
ಅಧಿಕಾರಿಗಳಲ್ಲೇ ಭಿನ್ನಾಭಿಪ್ರಾಯ: ಕಾಮಗಾರಿ ವೀಕ್ಷಣೆ ವೇಳೆ ಮೇಲಧಿಕಾರಿಗಳ ಮಾತಿಗೆ ಕೆಳಹಂತದ ಅಧಿಕಾರಿಗಳು ಸರಿಯಾದ ಉತ್ತರ ನೀಡದೆ ಅವರಲ್ಲೇ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಇದು ಅಧಿಕಾರಿಗಳಲ್ಲಿ ಹೊಂದಾಣಿಕೆಯಿಲ್ಲ ಎಂಬುದು ಸ್ಪಷ್ಟವಾಗಿ ಕಂಡು ಬಂತು.