ಗೋದಾಮಿಗೆ ಜಡಿದಿದ್ದ ಬೀಗ ತೆಗೆಸಿದ ಶಾಸಕ

13 LXR 5
Published on

ಲಕ್ಷ್ಮೇಶ್ವರ: ಸರ್ಕಾರಿ ಗೋದಾಮುಗಳಿಗೆ ಬೀಗ ಹಾಕಿರುವುದು ಸರಿಯಲ್ಲ. ಸರ್ಕಾರದಿಂದ ಹಂತಹಂತವಾಗಿ ಬಾಕಿ ವಸೂಲಿ ಮಾಡಬಹುದು. ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿರುವ ಖಾಸಗಿಯವರ ಮೇಲೆ ಮೊದಲು ಕ್ರಮ ಕೈಗೊಳ್ಳಿ. ಹೀಗೆ ಬೀಗ ಜಡಿಯುವುದು ಯೋಗ್ಯ ಕ್ರಮವಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಪುರಸಭೆ ಮುಖ್ಯಾಧಿಕಾರಿ ಮೇಲೆ ಗರಂ ಆದರು.

ಪಟ್ಟಣದಲ್ಲಿನ ಕರ್ನಾಟಕ ಉಗ್ರಾಣ ನಿಗಮದವರು 14 ಲಕ್ಷ ರೂ. ತೆರಿಗೆ ಬಾಕಿ ಪಾವತಿಸದ್ದರಿಂದ ಶನಿವಾರ ಮುಖ್ಯಾಧಿಕಾರಿ ಮಹೇಶ ಹಡಪದ ನೇತೃತ್ವದಲ್ಲಿ ಉಗ್ರಾಣಗಳಿಗೆ ಬೀಗ ಹಾಕಲಾಗಿತ್ತು. ಸೋಮವಾರ ಉಗ್ರಾಣ ನಿಗಮಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಭೇಟಿ ನೀಡಿ, ಗೋದಾಮುಗಳಿಗೆ ಬೀಗ ಹಾಕಿರುವುದನ್ನು ತೆಗೆಸಿದರು.

ಗೋದಾಮಿನಲ್ಲಿ ಗೋದಿ, ಜೋಳ, ಮೆಕ್ಕೆಜೋಳ, ಹೆಸರು ಶೇಂಗಾ ಸೇರಿ 10 ಸಾವಿರ ಚೀಲಗಳಿವೆ. 500 ಕ್ವಿಂಟಾಲ್ ಧಾನ್ಯಗಳನ್ನು ರೈತರು ಸಂಗ್ರಹಿಸಿದ್ದಾರೆ. ಹೀಗೆ ಸೀಜ್ ಮಾಡಿದಾಗ ಧಾನ್ಯ ಹಾಳಾದರೆ ಯಾರು ಹೊಣೆ?. ಎಂದು ಶಾಸಕರು ಹರಿಹಾಯ್ದರು.

ನಿಗಮದ ಅಧಿಕಾರಿಗಳೊಂದಿಗೆ ಫೋನ್‌ನಲ್ಲಿ ಮಾತನಾಡಿ, ಪುರಸಭೆಯವರು ಸೀಜ್ ಮಾಡಿ 3 ದಿನವಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಏಕೆ? ಎಂದು ತರಾಟೆಗೆ ತೆಗೆದುಕೊಂಡರು.

ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ನಿಗಮದವರು 2019ರಿಂದ ಒಟ್ಟು 14 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಹಲವು ಬಾರಿ ನೋಟಿಸ್ ನೀಡಿದ್ದೇವೆ. ನಿಗಮದ ಕಚೇರಿಗೆ ತೆರಳಿ ತೆರಿಗೆ ಪಾವತಿಸುವಂತೆ ತಿಳಿಸಿದ್ದೇನೆ. ಆದಾಗ್ಯೂ ಯಾವುದೇ ಸ್ಪಂದನೆ ದೊರೆತಿಲ್ಲ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬೀಗ ಹಾಕಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಮೊದಲು ಬೀಗ ತೆರೆೆಯಿರಿ. ಸಂಬಂಧಪಟ್ಟ ಅಧಿಕಾರ ಜತೆಗೆ ಮಾತನಾಡಿ ಬಾಕಿ ತುಂಬಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಹೇಳಿದರು. ತಹಸೀಲ್ದಾರ್ ವಾಸುದೇವ ಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ಬಸವರಾಜ ಚಕ್ರಸಾಲಿ, ವಿಜಯ ಬೂದಿಹಾಳ, ವಿಶಾಲ ಬಟಗುರ್ಕಿ, ವಿನಯ ಪಾಟೀಲ, ನಿಗಮದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net