

ಪ್ರಶಾಂತ ಭಾಗ್ವತ ಉಡುಪಿ
ಆರೋಗ್ಯ, ಶಿಕ್ಷಣ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ಮೂಲಕ ವಿಶ್ವದ ಗಮನ ಸೆಳೆದಿದ್ದ ಕರಾವಳಿ ನಗರಿ ಉಡುಪಿ ಇದೀಗ ಮಾದಕ ವಸ್ತು ದಂಧೆಕೋರರ ಕುಕೃತ್ಯದಿಂದಾಗಿ ಅಪಖ್ಯಾತಿ ಹೊಂದುವಂತಾಗಿದೆ.
ದೆಹಲಿಯ ಕೇಂದ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ಸಿಬಿ), ಆಪರೇಷನ್ ಮೆಡ್ ಮ್ಯಾಕ್ಸ್ ಎಂಬ ಹೆಸರಿನಲ್ಲಿ ಕಳೆದ ತಿಂಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ವಿಶ್ವದ ದಿಗ್ಗಜ ದೇಶಗಳೊಂದಿಗೆ ಉಡುಪಿಯಲ್ಲೂ ಒಂದು ಸೆಂಟರ್ ಇರುವುದನ್ನು ಪತ್ತೆ ಮಾಡಿದ್ದು, ಉಡುಪಿಗೆ ಕಪ್ಪು ಮಸಿ ಬಳಿದಂತಾಗಿದೆ.
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಹಯಗ್ರೀವ ನಗರದ 7ನೇ ಕ್ರಾಸ್ನಲ್ಲಿ ಮೆಡ್ ಮ್ಯಾಕ್ಸ್ ಡಿಜಿಟಲ್ ಎಂಬ ಕಾಲ್ಸೆಂಟರ್ ಕಾರ್ಯ ನಿರ್ವಹಿಸುತ್ತಿತ್ತು. ಅದನ್ನು ತಮಿಳುನಾಡು ಮೂಲದ ಸುರೇಶಕುಮಾರ್ ಕೆ. ಎಂಬಾತ ನಿರ್ವಹಿಸುತ್ತಿದ್ದ. ಇಲ್ಲಿದ್ದ 10 ಕೆಲಸಗಾರರಿಗೆ ಇದು ಡ್ರಗ್ಸ್ಗೆ ಸಂಬಂಧಿಸಿದ ಸೆಂಟರ್ ಎಂಬ ಮಾಹಿತಿ ಇರಲಿಲ್ಲ. ಸೆಂಟರ್ನ ಮುಖ್ಯಸ್ಥನನ್ನು ಎನ್ಸಿಬಿ ಅಧಿಕಾರಿಗಳು ತಿಂಗಳ ಹಿಂದೆಯೇ ಬಂಧಿಸಿ ದಿಲ್ಲಿಗೆ ಕರೆದೊಯ್ದಿದ್ದರೂ ಆತನ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನೂ ಲಭಿಸಿಲ್ಲ.
ಉಡುಪಿಯ ಕಾಲ್ಸೆಂಟರ್ನಿಂದ ಅಮೆರಿಕದಿಂದ ಡ್ರಗ್ಸ್ ಬರುವ ಬೇಡಿಕೆಗಳನ್ನು ನಿರ್ವಹಿಸುತ್ತಿತ್ತು ಎನ್ನುವುದು ಎನ್ಸಿಬಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 50 ಡ್ರಗ್ ಸರಕು ಸಾಗಾಟದ ಮಾಹಿತಿ ಉಡುಪಿಯಿಂದ ಹೊರಬಿತ್ತು. ಅವುಗಳಲ್ಲಿ 29 ಅಮೆರಿಕದಲ್ಲಿ, 18 ಆಸ್ಟ್ರೆಲಿಯಾದಲ್ಲಿ ಹಾಗೂ ಈಸ್ಟೋನಿಯಾ, ಸ್ಪೇನ್, ಸ್ವಿಝರ್ಲೆಂಡ್ಗಳಲ್ಲಿ ತಲಾ ಒಂದು ಸರಕು ಸಾಗಾಟ ಮಾಡಿರುವ ಮಾಹಿತಿ ಲಭಿಸಿತ್ತು.
ಡ್ರಗ್ಸ್ ಅಕ್ರಮ ಚಟುವಟಿಕೆಯ ಸಣ್ಣ ಸುಳಿವೂ ಸಹ ಲಭಿಸದಂತೆ ದೇಶದ ನಾಲ್ಕು ಮೂಲೆಗಳಲ್ಲಿ ಡ್ರಗ್ಸ್ ಮಾಫಿಯಾದವರು ಜಾಲ ವಿಸ್ತರಿಸಿಕೊಂಡಿದ್ದರು. ಉಡುಪಿಯಲ್ಲಿದ್ದ ಸೆಂಟರ್ನಲ್ಲಿ ಡ್ರಗ್ ಸಾಗಾಟ, ಸಂಗ್ರಹ ಇರಲಿಲ್ಲ. ಆದರೆ, ಈ ಕಾಲ್ಸೆಂಟರ್ ಮೂಲಕ ವಿಶ್ವದ ಮೂಲೆ ಮೂಲೆಯ ಸಂಪರ್ಕ ಹಾಗೂ ಮಾಹಿತಿ ಬರುತ್ತಿತ್ತು. ದೇಶದ ನಾಲ್ಕು ಕೇಂದ್ರದಿಂದ ಒಟ್ಟು ಎಂಟು ಮಂದಿ ಬಂಧಿಸಲಾಗಿದೆ. ಆಧುನಿಕ ಅಕ್ರಮ ವ್ಯವಹಾರ ಜಗತ್ತು ಬಳಸುವ ಎಲ್ಲ ತಾಂತ್ರಿಕತೆ, -ಡಿಜಿಟಲ್ ಪ್ಲಾಟ್ಫಾರಂ, ಕ್ರಿಫ್ಟೋ ಕರೆನ್ಸಿ, ನಿಯಂತ್ರಿತ ಮೆಡಿಸಿನ್ನ ಕಳ್ಳಸಾಗಣಿಕೆ- ಮಾಡಲಾಗುತ್ತಿತ್ತು ಎಂದು ಎನ್ಸಿಬಿ ತಿಳಿಸಿದೆ.
ಉಡುಪಿ-ಮಣಿಪಾಲದ ಭಾಗದಲ್ಲಿ ಮಾದಕ ದ್ರವ್ಯ ಸೇವಿಸುವ ಯುವಕರನ್ನು ಪೊಲೀಸರು ಆಗಾಗ ಬಂಧಿಸುತ್ತಿದ್ದಾರೆಂದರೆ ಇಲ್ಲಿಯೂ ಆ ಅಕ್ರಮ ದಂಧೆ ಇರುವುದು ಸ್ಪಷ್ಟ. ಆರೋಗ್ಯ, ಶಿಕ್ಷಣ ಹಾಗೂ ಧಾರ್ಮಿಕ ತಾಣದಿಂದ ಖ್ಯಾತಿ ಹೊಂದಿರುವ ಉಡುಪಿಗೆ ಕೆಟ್ಟ ಹೆಸರು ತರುತ್ತಿರುವ ಡ್ರಗ್ಸ್ ಮಾಫಿಯಾ ಜಾಲವನ್ನು ಪೊಲೀಸರು ಪತ್ತೆ ಹಚ್ಚಬೇಕು. ಬೇರು ಸಮೇತ ಆ ದಂಧೆಯನ್ನು ನಿರ್ಮೂಲನೆ ಮಾಡುವಂತಹ ಕಾರ್ಯಾಚರಣೆ ನಡೆಸಬೇಕು. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳು ಅಥವಾ ಎನ್ಡಿಪಿಎಸ್ ಡ್ರಗ್ಸ್ ನಿಯಂತ್ರಣಕ್ಕಾಗಿ ಗಂಭೀರ ಹಾಗೂ ವ್ಯವಸ್ಥಿತ ಕಾರ್ಯಾಚರಣೆ ನಡೆಯುತ್ತಿದೆ. ಮೂರು ವರ್ಷದಲ್ಲಿ 846 ಜನರನ್ನು ಬಂಧಿಸಲಾಗಿದೆ. ಮಾದಕ ವಸ್ತುಗಳ ಮಾರಾಟ&ಖರೀದಿ ವಿಚಾರವಾಗಿ ಜಿಲ್ಲೆಯ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. | ಹರಿರಾಂ ಶಂಕರ್. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ
ವರ್ಷ ಡ್ರಗ್ಸ್ ಪ್ರಕರಣ ಬಂಧಿತರ ಸಂಖ್ಯೆ 2022 262 282 2023 272 304 2024 123 153 2025(ಜೂನ್) 87 107
ಉಡುಪಿ: ಮಾದಕ ದ್ರವ್ಯ ಪೂರೈಕೆ ಪ್ರಕರಣದಲ್ಲಿ ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾಲ್ಸೆಂಟರ್ನ ಮುಖ್ಯಸ್ಥನನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ತನ್ಮೂಲಕ ಉಡುಪಿ-ಮಣಿಪಾಲದ ಪರಿಸರದಲ್ಲಿ ಡ್ರಗ್ಸ್ ಜಾಲ ದೊಡ್ಡ ಮಟ್ಟದಲ್ಲಿ ಬೇರೂರಿದ ಅಂಶ ಬಯಲಿಗೆಳೆದಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಡ್ರಗ್ಸ್ ಜಾಲ ಮಟ್ಟಹಾಕಲು ವಿಶೇಷ ಕಾರ್ಯತಂತ್ರ ರೂಪಿಸಬೇಕು ಎಂದು ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಒತ್ತಾಯಿಸಿದ್ದಾರೆ.
ದಶಕಗಳಿಂದಲೂ ಜಿಲ್ಲೆಯಲ್ಲಿ ಮಾದಕ ದ್ರವ್ಯದ ಜಾಲವಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಇದೀಗ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲದಲ್ಲೂ ಉಡುಪಿಯ ನಂಟಿದೆ ಎಂಬ ಮಾಹಿತಿ ಅತ್ಯಂತ ಆಘಾತಕಾರಿಯಾಗಿದೆ.
ಬುದ್ಧಿವಂತರ ಜಿಲ್ಲೆ ಎಂದೇ ಗುರುತಿಸಿಕೊಂಡಿರುವ ಉಡುಪಿಯಲ್ಲಿ ಅನ್ಯ ರಾಜ್ಯ, ದೇಶಗಳಿಂದ ವಿದ್ಯಾಭ್ಯಾಸಕ್ಕೆಂದು ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಇಂತಹ ಜಿಲ್ಲೆಗೆ ಕಪ್ಪು ಚುಕ್ಕಿಯಾಗಿ ಡ್ರಗ್ಸ್ ಜಾಲ ಹಬ್ಬಿರುವುದು ಜಿಲ್ಲೆ ಖ್ಯಾತಿಗೆ ಕಳಂಕ ತರುವಂತಾಗಿದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕಾಲ್ ಸೆಂಟರ್ಗಳ ಮಾಹಿತಿ ಪಡೆದು ಸಮಗ್ರ ತನಿಖೆ ನಡೆಸಬೇಕು ಎಂದು ವಿಕ್ರಮಾರ್ಜುನ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.