

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿದ ಕಿಡಿಗೇಡಿಯೊಬ್ಬ ಆಕೆಯ ಬಟ್ಟೆ ಹಿಡಿದು ಎಳೆದಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪರಾರಿಯಾಗಿರುವ ಘಟನೆ ಜಯನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನ.9ರಂದು ರಾತ್ರಿ 10.40ರ ಸುಮಾರಿಗೆ ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯಿರುವ ನಗರದ ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯ ಎದುರೇ ಈ ಘಟನೆ ನಡೆದಿದೆ. ಬನಶಂಕರಿ 2ನೇ ಹಂತದ ಅಶೋಕನಗರ ನಿವಾಸಿ ೨೬ ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ಸಂತ್ರಸ್ತೆ ಕೂಡ್ಲು ಗೇಟ್ ಬಳಿ ಕೆಲಸ ಮಾಡುತ್ತಿದ್ದು, ನ.೬ರಂದು ರಾತ್ರಿ ಕೆಲಸ ಮುಗಿಸಿಕೊಂಡು ಕನಕಪುರ ಮುಖ್ಯರಸ್ತೆ ಕಡೆಯಿಂದ ಮನೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಮಾರ್ಗ ಮಧ್ಯೆ ಜಯನಗರದ ಸೌತ್ ಎಂಡ್ ಸರ್ಕಲ್‌ನ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿ ತೆರಳುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದು ದುಷ್ಕರ್ಮಿಯೊಬ್ಬ ಸಂತ್ರಸ್ತೆಯ ಬಟ್ಟೆ ಹಿಡಿದು ಎಳೆದಾಡಿ, ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾನೆ. ನಂತರ ಕನಕಪುರ ಮುಖ್ಯರಸ್ತೆಯ ಸರ್ಕಲ್ ಬಳಿ ತನ್ನ ದ್ವಿಚಕ್ರ ವಾಹನ ಯುಟರ್ನ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿರುವ ಜಯನಗರ ಠಾಣೆ ಪೊಲೀಸರು, ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.