

ಟಿ.ಎಸ್.ಲಕ್ಷ್ಮೀಕಾಂತ್ ತ್ಯಾಮಗೊಂಡ್ಲು
ಎಪ್ಪತ್ತರ ದಶಕದಲ್ಲಿ ಮುನಿಸಿಪಲ್ ಆಗಿ, ಕ್ರಮೇಣ ಹಿಂಬಡ್ತಿ ಪಡೆದು ಮಂಡಲ ಪಂಚಾಯ್ತಿಯಾಗಿ ಬಳಿಕ ಗ್ರಾಮ ಪಂಚಾಯಿತಿಯಾಗಿರುವ ತ್ಯಾಮಗೊಂಡ್ಲು, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುವ ಅರ್ಹತೆ ಹೊಂದಿದೆಯಾದರೂ ಚುನಾಯಿತ ಪ್ರತಿನಿಧಿಗಳ ಅಸಡ್ಡೆಯಿಂದಾಗಿ, ಆ ಕನಸು ನನಸಾಗುವ ಲಕ್ಷಣ ಕಾಣುತ್ತಿಲ್ಲ.
ಚುನಾವಣೆ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಡೇ ತೀರುವುದಾಗಿ ಭರವಸೆ ನೀಡಿದ್ದ ಸಂಸದರು ಮತ್ತು ಶಾಸಕರು, ಗೆದ್ದ ನಂತರ ಆ ಭರವಸೆಯನ್ನೇ ಮರೆತಿದ್ದಾರೆ.
ಹತ್ತು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಗ್ರಾಮವನ್ನು ಮೇಲ್ದರ್ಜೆಗೆ ಏರಿಸಬಹುದು ಎಂದು ಸರ್ಕಾರದ ಆದೇಶವಿದೆ. ಮಾಜಿ ಸಚಿವ ಅಂಜನಮೂರ್ತಿ ಶಿಫಾರಸಿನ ಮೇರೆಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರಲ್ಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಟಿಪ್ಪಣಿ ಬರೆದು, ಈಗಾಗಲೇ ತ್ಯಾಮಗೊಂಡ್ಲು ಪಟ್ಟಣಕ್ಕೆ ಸೇರ್ಪಡೆಗೊಂಡಿರುವ ಮಣ್ಣೆ ಪಂಚಾಯಿತಿಯ ತಿಪ್ಪಶೆಟ್ಟಿಹಳ್ಳಿ ಮತ್ತು ಬೀರಗೊಂಡನಹಳ್ಳಿ ಒಳಗೊಂಡಂತೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ತಾಲೂಕು ಕಾರ್ಯನಿರ್ವಾಣಾಧಿಕಾರಿಗಳಿಗೆ ರವಾನಿಸಿದ್ದರು. ಈ ಕಡತ ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದೆ. ನಂತರ ಈ ವಿಷಯ ನನೆಗುದಿಗೆ ಬಿದ್ದಿದೆ.
ಕಾಲ ಮಿಂಚುವ ಮೊದಲು ಎಚ್ಚೆತ್ತುಕೊಳ್ಳಿ: ಗ್ರಾಪಂಗಳಿಗೆ ಚುನಾವಣೆ ೋಷಿಸಲು ಸರ್ಕಾರ ತಯಾರಿ ನಡೆಸಿದೆ. ಚುನಾವಣಾ ದಿನಾಂಕ ಘೋಷಣೆಯಾದರೆ ಮೇಲ್ದರ್ಜೆಗೇರುವ ಕನಸು ಮತ್ತೆ 5 ವರ್ಷ ಮುಂದಕ್ಕೆ ಹೋಗಲಿದೆ. ಆದ್ದರಿಂದ ಈಗಲಾದರೂ ಶಾಸಕರು ಮತ್ತು ಸಂಸದರು ಎಚ್ಚೆತ್ತುಕೊಳ್ಳಬೇಕು.
ಬರುತ್ತಿವೆ ಅನೇಕ ಕೈಗಾರಿಕೆಗಳು: ತ್ಯಾಮಗೊಂಡ್ಲು ಕೈಗಾರಿಕಾ ವಲಯ ಹಿಗ್ಗುತ್ತಿದೆ. ಪೀಣ್ಯ ಕೈಗಾರಿಕಾ ವಲಯದಿಂದ ಸಾಕಷ್ಟು ಕೈಗಾರಿಕೆಗಳು ಇಲ್ಲಿಗೆ ಸ್ಥಳಾಂತರಗೊಳ್ಳುತ್ತಿವೆ. ಕಾರ್ಮಿಕರ ವಲಸೆಯಿಂದ ಗ್ರಾಮದ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಮೇಲ್ದರ್ಜೆಗೇರಿಸಿ ಇಲ್ಲಿನ ನಿವಾಸಿಗಳಿಗೆ ಮೂಲಸೌಕರ್ಯ ಹೆಚ್ಚಿಸಬೇಕಾದ್ದು ಸರ್ಕಾರದ ಕರ್ತವ್ಯ.
ಅಗತ್ಯ ದಾಖಲಾತಿಗಳೊಂದಿಗೆ ಮಾಜಿ ಸಚಿವರ, ಮುಖ್ಯಮಂತ್ರಿಗಳ ಶಿಫಾರಸು ಪತ್ರ ಸಹಿತ ಜಿಲ್ಲಾಧಿಕಾರಿಗಳ ಕಚೇರಿಗೆ ಕಡತ ಹೋಗಿದೆ. ಆದರೆ, ಆ ಕಡತ ಏನಾಗಿದೆ ಎಂದು ವಿಚಾರಿಸಲಾಗದಷ್ಟು ಶಾಸಕರು ಮತ್ತು ಸಂಸದರು ಬಿಜಿಯಾಗಿದ್ದಾರೆ. ತಕ್ಷಣವೇ ಅವರೆಲ್ಲರೂ ಎಚ್ಚೆತ್ತುಕೊಂಡು, ಗ್ರಾಪಂ ಚುನಾವಣೆ ದಿನಾಂಕ ೋಷಣೆಗೂ ಮುನ್ನ ಈ ಕಡತಕ್ಕೆ ಮರುಜೀವ ಕೊಡಬೇಕು. ಟಿ.ಎನ್. ಹನುಮಂತರಾಜು, ತ್ಯಾಮಗೊಂಡು ಗ್ರಾಪಂ ಮಾಜಿ ಅಧ್ಯಕ್ಷ ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿಯನ್ನು ಚುನಾವಣಾ ಭಾಷಣಕ್ಕೆ ಸೀಮಿತಗೊಳಿಸಿದ್ದಾರೆ. ಅವರು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರೆ ಕೆಲಸವಾಗುತ್ತದೆ. ಆದರೆ ಅವರಿಗೆ ಅದಕ್ಕೂ ಸಮಯ ಇಲ್ಲದಾಗಿದೆ. ಅವರು ಎಚ್ಚೆತ್ತುಕೊಳ್ಳದಿದ್ದರೆ, ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತದೆ. ಸಿ.ಅಶ್ವತ್ಥ ಕುಮಾರ್, ತ್ಯಾಮಗೊಂಡ್ಲು ನಿವಾಸಿ ತ್ಯಾಮಗೊಂಡ್ಲು ಗ್ರಾಪಂ ಸದಸ್ಯರ ಸಭೆಯಲ್ಲಿ ಅಂಗೀಕರಿಸಿದ ನಡಾವಳಿ ಮತ್ತು ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ 2017ರ ಮೇ 10ರಂದು ಪ್ರಸ್ತಾವನೆ ಕಡತ ಹೋಗಿದೆ. ನಂತರ ಅಲ್ಲಿಂದ ಯಾವುದೇ ಮಾಹಿತಿ ಬಂದಿಲ್ಲ, ಯಾವುದೇ ದಾಖಲೆ ಕೇಳಿದರೂ ಒದಗಿಸಲು ನಾವು ಸಿದ್ಧರಿದ್ದೇವೆ. ಲಕ್ಷ್ಮಿನಾರಾಯಣಸ್ವಾಮಿ, ನೆಲಮಂಗಲ ತಾಪಂ ಇಒ