

ತಿ.ನರಸೀಪುರ: ಪವಾಡಗಳ ಮೂಲಕ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಶ್ರೀ ಮಹದೇಶ್ವರ ನಂಬಿದ ಭಕ್ತರನ್ನು ಕಾಪಾಡುವ ಮೂಲಕ ತಾಲೂಕಿನ ಯರಗನಹಳ್ಳಿ ಗ್ರಾಮದ ಹೊರವಲಯದ ಬಯಲು ಪ್ರದೇಶದಲ್ಲಿ ನೆಲೆಗೊಂಡಿದ್ದಾರೆ.
ಮೂಗೂರು ಹೋಬಳಿಯ ಕುಗ್ರಾಮವಾಗಿರುವ ಯರಗನಹಳ್ಳಿ ಗ್ರಾಮದ ಬಳಿ ಕಲ್ಲಿನ ಲಿಂಗದ ರೂಪದಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿರುವ ಶ್ರೀ ಮಹದೇಶ್ವರರು ಉದ್ಭವ ಮೂರ್ತಿಯಾಗಿ ನೆಲೆ ನಿಂತಿದ್ದಾರೆ. ನಾಲ್ಕು ಶತಮಾನದಷ್ಟು ಹಳೆಯ ದೇವಾಲಯ ಎನ್ನಲಾಗುತ್ತಿದ್ದು, ನೂರಾರು ವರ್ಷಗಳ ಹಿಂದೆ ಪೂರ್ವಿಕರು ಕೊಂಡ ಹಾಗೂ ಜಾತ್ರೋತ್ಸವವನ್ನು ನಡೆಸುತ್ತಿದ್ದದ್ದು ಈಗ ಇತಿಹಾಸ. ಕಪ್ಪಡಿ ಪರುಷೆ ದೇವಾಲಯ ಬಳಿ ತಂಗುತ್ತಿದ್ದುದ್ದರಿಂದ ಕಪ್ಪಡಿ ಮಹದೇಶ್ವರ ಎಂಬ ಹೆಸರಿನಲ್ಲೂ ಕರೆಯಲಾಗುತ್ತಿತ್ತು.
ದೇವಾಲಯದಲ್ಲಿ ನಿತ್ಯ ಸ್ವಾಮಿಗೆ ಪೂಜೆ ವಾಡಿಕೆಯಂತೆ ನಡೆಯುತ್ತದೆ. ಸೋಮವಾರ, ಶುಕ್ರವಾರ, ಪ್ರತಿ ಅಮಾವಾಸ್ಯೆ, ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಅಮಾವಾಸ್ಯೆ, ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಗೌರಿ ಗಣೇಶ, ಆಯುಧ ಪೂಜೆ - ವಿಜಯದಶಮಿ ಹಾಗೂ ದೀಪಾವಳಿಯಂದು ರಾತ್ರಿ ಗ್ರಾಮದಲ್ಲಿ ಹುಲಿವಾಹನ ಉತ್ಸವ ನೆರವೇರಲಿದೆ. ಅರ್ಚಕ ಗುರುಮಲ್ಲಪ್ಪ ಅವರ ತಂದೆ ದಿ.ಮರಿಕೆಂಚಪ್ಪ ಹಾಗೂ ತಾತ ದಿ.ಮಾದಪ್ಪ ಸೇರಿದಂತೆ ನಾಲ್ಕು ತಲೆ ಮಾರಿನಿಂದಲೂ ಮಲೆ ಮಹದೇಶ್ವರರನ್ನು ಪೂಜಿಸಲಾಗುತ್ತಿದೆ.
ದೇವಾಲಯ ಹಿನ್ನೆಲೆ: ಆರಂಭದಲ್ಲಿ ಸರಗೂರು ಮೂಲದ ಮಹದೇಶ್ವರರ ಒಕ್ಕಲಿನವರು ಪುಟ್ಟ ಗುಡಿಯಲ್ಲಿ ಉದ್ಭವ ಮೂರ್ತಿಯನ್ನು ಪೂಜಿಸುತ್ತಿದ್ದರು. ಅವರೆಲ್ಲರೂ ಊರು ತೋರೆಯುವ ವೇಳೆ ವಾಸದ ಮನೆ ಹಾಗೂ ಅನುಭವದಲ್ಲಿದ್ದ ದೇವಾಲಯದ ಸುತ್ತಲಿನ 4.30 ಜಮೀನನ್ನು ದೇವರ ಹೆಸರಿಗೆ ಬರೆದು ತಮ್ಮ ಪೂರ್ವಿಕರ ಕೈಗಿಟ್ಟು, ದೇವಾಲಯದ ಜವಾಬ್ದಾರಿಯನ್ನು ನೀಡಿ ಹೋದರು. ಬಳಿಕ ಪೂಜಾ ಕಾರ್ಯವನ್ನು ನಮ್ಮ ಕುಟುಂಬದವರೇ ನೆರವೇರಿಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಗುರುಮಲ್ಲಪ್ಪ. ದೇವಾಲಯ ಸುತ್ತಲಿನ ಜಮೀನಿನ ರಕ್ಷಣೆಗೆ ಸರ್ಪವೊಂದು ಕಾವಲಿದ್ದು, ಒತ್ತುವರಿ ಮಾಡಿಕೊಳ್ಳುವ ಅತಿಕ್ರಮಣಕಾರರಿಗೆ ಕಾಣಿಸಿಕೊಂಡು ಒಂದಿಂಚು ಭೂಮಿ ಆಕ್ರಮಣವಾಗದಂತೆ ನೋಡಿಕೊಳ್ಳುತ್ತಿದೆ ಎನ್ನುತ್ತಾರೆ.
ಹುಟ್ಟಿದ್ದು ಉತ್ತರ ದೇಶ.ಬೆಳೆದದ್ದು ಕತ್ತಲ ರಾಜ್ಯ. ಬಾಳೆ ಎಲೆ ಸೀಮೆಯಿಂದ ಬಂದ ಮಹದೇಶ್ವರರು ಪಶ್ಚಿಮ ಘಟ್ಟದ 77 ಮಲೆಗಳ ನಡುವಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಐಕ್ಯರಾಗಿರುವ ಮಹದೇಶ್ವರರ ಮಹಿಮೆ ಅಪಾರವಾದದ್ದು. ಸುತ್ತೂರು ಮಠದಲ್ಲಿ ರಾಗಿ ಬೀಸಿದ ಬಳಿಕ ಕುಂತೂರು ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಜೀಮಾರಹಳ್ಳಿ-ಕಲ್ಕುಂದ ಗೆಟ್ ಬಳಿ ತಂಗಿದ್ದರು ಎನ್ನವುದು ಈಗ ಇತಿಹಾಸ. ಬನ್ನಹಳ್ಳಿಹುಂಡಿ ಚಾವಡಿ ಕಟ್ಟೆಯಲ್ಲಿ ಕುಳಿತ ಬಳಿಕ ಯರಗನಹಳ್ಳಿ ಬಳಿಯ ಬಯಲು ಪ್ರದೇಶದಲ್ಲಿ ಉಳಿದಿದ್ದರು. ಅವರು ಕುಳಿತಿರುವ ಸ್ಥಳದಲ್ಲಿಯೇ ದೇವರು ಉದ್ಭವವಾಗಿದೆ. ಹಾಗಾಗಿ ಆ ಸ್ಥಳಗಳೆಲ್ಲವೂ ಧಾರ್ಮಿಕ ದೇವಾಲಯಗಳಾಗಿ ಪುಣ್ಯಕ್ಷೇತ್ರಗಳಾಗುತ್ತಿವೆ ಎಂಬುದು ಭಕ್ತರ ಭಾವನೆ.
ಯರಗನಹಳ್ಳಿ ಹಾಗೂ ಧರ್ಮಯ್ಯನಹುಂಡಿ ಗ್ರಾಮದ ಆರಾಧ್ಯ ದೈವವಾಗಿರುವ ಮಹದೇಶ್ವರರ ದೇವಾಲಯವನ್ನು ಎರಡೂ ಗ್ರಾಮಗಳ ಗ್ರಾಮಸ್ಥರು ಜೀರ್ಣೋದ್ಧಾರಗೊಳಿಸಿದ್ದಾರೆ. ಮಾ.20 ರಂದು ದೇವಸ್ಥಾನ ಜೀರ್ಣೋದ್ಧಾರ ಮತ್ತು ಸಂಪ್ರೋಕ್ಷಣ ಸಮಾರಂಭ ವಿಜೃಂಭಣೆಯಿಂದ ನೆರವೇರಿತು. ಅಲ್ಲದೆ ಮೇ.6ರಂದು ಮರುಪೂಜೆ ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ದಾಸೋಹ ಭವನ ನಿರ್ಮಾಣ ಮಾಡಿ, ಅಮಾವಾಸ್ಯೆ ಹಾಗೂ ವಿಶೇಷ ಪೂಜಾ ದಿನಗಳಲ್ಲಿ ದಾಸೋಹ ಮಾಡಬೇಕು. ಮದುವೆ, ನಿಶ್ಚಿತಾರ್ಥ, ನಾಮಕರಣ ಹಾಗೂ ಇತರ ಶುಭ ಕಾರ್ಯಗಳಿಗೆ ಅವಕಾಶ ಕಲ್ಪಿಸಿ ದೇವಾಲಯವನ್ನು ಪುಣ್ಯಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಬೇಕೆಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ಗೌಡ್ರಹಟ್ಟಿ ನಾಗೇಂದ್ರ.
ತಾಲೂಕು ಕೇಂದ್ರದಿಂದ 5 ಕಿಮೀ: ತಾಲೂಕಿನ ಯರಗನಹಳ್ಳಿ ಗ್ರಾಮದಿಂದ 500 ಮೀಟರ್ ದೂರದ ವಿಶಾಲವಾದ ಬಯಲು ಪ್ರದೇಶದಲ್ಲಿ ಶ್ರೀ ಮಹದೇಶ್ವರರ ದೇವಾಲಯವಿದೆ. ದೇವಾಲಯಕ್ಕೆ ಹೋಗಲು ಯಾವುದೇ ವಾಹನಗಳ ಸೌಲಭ್ಯವಿಲ್ಲ. ಪ್ರಯಾಣಿಕರ ಆಟೋ ಅಥವಾ ಸ್ವಂತ ವಾಹನಗಳಲ್ಲಿ ಹೋಗಬೇಕು. ನಂಜನಗೂಡು ಮುಖ್ಯ ರಸ್ತೆಯ ಹೆಳವರಹುಂಡಿ ಮುಂದೆ ಹಾಗೂ ಬನ್ನಹಳ್ಳಿಹುಂಡಿ ಎಡಭಾಗಕ್ಕೆ ತಿರುವು ತೆಗೆದುಕೊಂಡರೆ ದೇವಾಲಯ ತಲುಪಬಹುದು. ಹೌಸಿಂಗ್ ಬೋರ್ಡ್ ಬಡಾವಣೆ, ಮುದ್ದಬೀರನಹುಂಡಿ, ಧರ್ಮಯ್ಯನ ಹುಂಡಿ , ಆಲಗೂಡು, ಕರೋಹಟ್ಟಿ ಹಾಗೂ ಹೊಸೂರುಹುಂಡಿ ಗ್ರಾಮಗಳ ಮಾರ್ಗವಾಗಿಯೂ ದೇವಾಲಯ ತಲುಪಬಹುದು.
ಪವಾಡ ಪುರುಷ ಶ್ರೀ ಮಲೆ ಮಹದೇಶ್ವರರ ನಡೆದು ಬರುವಾಗ ತಂಗುತ್ತಿದ್ದ ಸ್ಥಳಗಳಲ್ಲಿ ದೇವಾಲಯಗಳು ತಲೆ ಎತ್ತಿವೆ. ಇದು ಭಕ್ತರನ್ನು ಕಾಪಾಡಲು ಅವರ ಇರುವಿಕೆಯ ಹೆಗ್ಗುರುತು. ಭಕ್ತರ ಕಾಳಜಿಯಿಂದ ದೇವಾಲಯಗಳು ಜೀರ್ಣೋದ್ಧಾರಗೊಂಡು ಪುಣ್ಯಕ್ಷೇತ್ರಗಳಾಗುತ್ತಿವೆ. ಸುತ್ತೂರು ಮಠದಿಂದ ಕುಂತೂರು ಮಠಕ್ಕೆ ತೆರಳುವಾಗ ಯರಗನಹಳ್ಳಿ ಬಳಿ ಉಳಿದು ವಾಟಾಳು ಮಠಕ್ಕೂ ಬಂದಿದ್ದರು. ಶ್ರೀಮಹದೇಶ್ವರರ ಹೆಜ್ಜೆಯ ಗುರುತುಗಳಿಂದ ಈ ಭಾಗದ ಜನರ ಜೀವನ ಸುಭಿಕ್ಷವಾಗಿದೆ.
ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಾಟಾಳು ಮಠ
ನಂಬಿದ ಭಕ್ತರನ್ನು ಕಾಪಾಡುವ ಮಹದೇಶ್ವರರನ್ನು ಪೂಜಿಸಿದರೆ ಇಷ್ಟಾರ್ಥ ನೆರವೇರಲಿದೆ. ಪೂರ್ವಜರು ನಡೆಸಿಕೊಂಡು ಬರುತ್ತಿದ್ದ ಧಾರ್ಮಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಜೀರ್ಣೋದ್ಧಾರಗೊಂಡಿರುವ ದೇವಾಲಯದಲ್ಲಿ ಕುಡಿಯುವ ನೀರಿನ ಸೌಲಭ್ಯ ನಿರಂತರವಾಗಿದೆ. ನಂಜನಗೂಡು ಮುಖ್ಯ ರಸ್ತೆಯಿಂದ ನೇರವಾಗಿ ಸಂಪರ್ಕ ಕಲ್ಪಿಸುವ ಜಮೀನು ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇವೆ. ಮಹದೇಶ್ವರರು ಉಳಿದಿದ್ದ ದೇವಾಲಯದಲ್ಲಿ ನಿತ್ಯ ಪೂಜೆ, ವಾರ ಹಾಗೂ ಹಬ್ಬ ಹರಿದಿನಗಳ ವಿಶೇಷ ಪೂಜೆ ಮಾಡಸಲಿಚ್ಛಿಸುವ ಭಕ್ತರು ಮೊ.ಸಂಖ್ಯೆ :97403 08600 ಸಂಪರ್ಕಿಸಬಹುದು.
ಗುರುಮಲ್ಲಪ್ಪ ಅರ್ಚಕ, ಯರಗನಹಳ್ಳಿ