

ಹರಪನಹಳ್ಳಿ: ಸಮಾಜದ ಉದ್ಧಾರ ಹಾಗೂ ಧರ್ಮ ಪ್ರಚಾರಕ್ಕಾಗಿ ಹದಿನೈದನೇ ಶತಮಾನದಲ್ಲಿ ಸಂತ ಕೂಲಹಳ್ಳಿ ಗೋಣಿಬಸವೇಶ್ವರ ಕೈಗೊಂಡ ಕಾರ್ಯಗಳು ಜನಮಾನಸದಲ್ಲಿ ಉಳಿದಿವೆ ಎಂದು ಗೋಣಿಬಸವೇಶ್ವರ ಪೌರಾಣಿಕ ನಾಟಕದ ಕತೃ ಎಚ್ ಎನ್ ಕೊಟ್ರಪ್ಪ ತಿಳಿಸಿದರು.
ತಾಲೂಕಿನ ಬಾಗಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಗೋಣಿಬಸವೇಶ್ವರ ಚರಿತ್ರೆ ಎಂಬ ಐತಿಹಾಸಿಕ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂರು ತಲೆಮಾರುಗಳಿಂದ ವಿಶ್ವಕಲಾ ಯುವಕ ರೈತ ನಾಟ್ಯ ಸಂಘ ಬಾಗಳಿ ಇವರ ವತಿಯಿಂದ ನಾಡಿನಾದ್ಯಂತ ನಿರಂತರವಾಗಿ ಗೋಣಿಬಸವೇಶ್ವರ ಪವಾಡ ಹಾಗೂ ಜೀವನ ಚರಿತ್ರೆಯ ಬಗ್ಗೆ ನಿಸ್ವಾರ್ಥವಾಗಿ ನೂರಾರು ಪ್ರದರ್ಶನಗಳನ್ನು ಮಾಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ತಂತ್ರಜ್ಞಾನ ಹಾಗೂ ಜಾಗತಿಕವಾಗಿ ಸಮಾಜವು ಮುಂದುವರಿದಿದ್ದರೂ ಅಜ್ಜನ ಜೀವನ ಚರಿತ್ರೆಯ ಕುರಿತು ಪ್ರತಿ ವರ್ಷ ಪ್ರದರ್ಶನಗೊಳ್ಳುವ ನಾಟಕವನ್ನು ಇಂದಿಗೂ ಉತ್ಸಾಹ ಕಳೆದುಕೊಳ್ಳದೆ ಇರುವುದು ಅಜ್ಜನ ಪವಾಡವೇ ಸರಿ ಎಂದರು. ಸುಮಾರು 60 ವರ್ಷಗಳಿಂದ ಪೌರಾಣಿಕ ಕತೆಯನ್ನು ಪ್ರತೀ ಪಾತ್ರದಾರಿಯು ಅದರ ಜೀವಂತಿಕೆಯನ್ನು ಯಥಾವತ್ತಾಗಿ ಇಂದಿಗೂ ಮುಂದುವರಿಸಿರುವುದು ಅಜ್ಜನ ಮೇಲೆ ಭಕ್ತಿ-ಶ್ರದ್ಧೆಯೇ ಕಾರಣವಾಗಿದೆ ಎಂದರು.
ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ, ಬಯಲಾಟ ಅಕಾಡೆಮಿ ತಾಲೂಕು ಅಧ್ಯಕ್ಷ ಕೆ ರುದ್ರಪ್ಪ, ನಿವೃತ್ತ ಲೋಕಾಯುಕ್ತ ಪೊಲೀಸ್ ಅಧಿಕಾರಿ ಸಿ ಕೊಟ್ರೇಶ, ನಿವೃತ್ತ ಮುಖ್ಯ ಶಿಕ್ಷಕ ವಿಬಿ ಮಲ್ಲೇಶ್, ಎಚ್‌ಎಂಪ್ರಕಾಶ, ಎನ್ ಮಂಜುನಾಥ, ಬಣಕಾರ ರಾಜಶೇಖರ, ಬಣಕಾರ ಮಂಜುನಾಥ, ವಿ ಬಿ ವೀರೇಶ ಇತರರಿದ್ದರು.