ಶೀಘ್ರ ಸಿಗಲಿದೆ ಮಂತ್ರಿ ಪದವಿ, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ವಿಶ್ವಾಸ, ಹೊಸಕೋಟೆಯಲ್ಲಿ ಆರೋಗ್ಯ ಕಾರ್ಡ್ ವಿತರಣೆ

20-Manjunath-HSK-01
Published on

ಹೊಸಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತಿಗೆ ಬದ್ಧರಾಗಿದ್ದಾರೆ. ಕೊಟ್ಟ ಮಾತಿನಂತೆ ನನಗೆ ಸಚಿವ ಸ್ಥಾನ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.

ನಗರದ 28ನೇ ವಾರ್ಡ್‌ನ ಸಾರ್ವಜನಿಕರಿಗೆ ಭಾನುವಾರ ಉಚಿತವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ ಮಾಡಿ ಮಾತನಾಡಿದರು. ಅಧಿವೇಶನದ ನಂತರ ಸಚಿವ ಸ್ಥಾನ ದೊರೆಯಲಿದ್ದು, ಯಾವುದೇ ಖಾತೆ ನೀಡಿದರೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಜತೆಗೆ ಹೊಸಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಪ್ರಗತಿಗೆ ಅನುದಾನ ಸಿಗಲಿಲ್ಲ ಎಂಬ ಕಾರಣಕ್ಕೆ ಮಂತ್ರಿ ಪದವಿಗೆ ರಾಜೀನಾಮೆ ನೀಡಿದೆ. ಶಿಸ್ತಿನ ಪಕ್ಷ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವನಾಗಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತೇನೆ ಎಂದರು.

ನಗರದಲ್ಲಿ 31 ವಾರ್ಡ್‌ಗಳಲ್ಲಿ ಈಗಾಗಲೇ 24 ವಾರ್ಡ್‌ಗಳಲ್ಲಿ ಆರೋಗ್ಯ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ವಾರ್ಡ್ ಹಾಗೂ ಗ್ರಾಪಂನ ಪ್ರತಿ ಹಳ್ಳಿಗಳಲ್ಲೂ ಈ ಸೌಲಭ್ಯ ತಲುಪಿಸಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಬಡವರಿಗೆ ಉಚಿತ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರತಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ ಎಂದರು.

ಎಂಎಲ್‌ಸಿ ಎಂಟಿಬಿ ನಾಗರಾಜ್ ಅವರ ಆದೇಶದ ಮೇರೆಗೆ 28ನೇ ವಾರ್ಡ್‌ನ ಸಾರ್ವಜನಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ವಾರ್ಡ್‌ನಲ್ಲಿ 1700ಕ್ಕೂ ಅಧಿಕ ನಿವಾಸಿಗಳಿದ್ದು, ಕಷ್ಟಕಾಲದಲ್ಲಿ ಆರೋಗ್ಯ ಕಾರ್ಡ್ ಸಹಾಯಕ್ಕೆ ಬರಲಿದೆ ಎಂದು ನಗರಸಭಾ ಸದಸ್ಯೆ ಆಶಾ ರಾಜ್ ಶೇಖರ್ ತಿಳಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿ. ಜಯರಾಜ್, ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸಂತೋಷ್ ಚಕ್ರವರ್ತಿ, ಮುಖಂಡರಾದ ಮಲ್ಲಸಂದ್ರ ನಾಗರಾಜ್, ನವೀನ್, ಅಮೋಘ್, ದಿನೇಶ್, ಕೃಷ್ಣ ಪ್ರಸಾದ್, ಸಾವಿತ್ರಮ್ಮ, ಅನಿತಾ, ಮಂಜುಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net