

ಮೈಸೂರು: ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನ ಭಾನುವಾರ ಸಂಜೆ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಮನಸ್ಸುಗಳ ಬೆಸುಗೆಗೆ, ಸಮ್ಮಿಲನದ ಸಂಭ್ರಮಕ್ಕೆ ವೇದಿಕೆಯಾಯಿತು. ಉತ್ತರ ಕರ್ನಾಟಕ ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ‘ದಸರಾ ಸಂಭ್ರಮ’ ಕಾರ್ಯಕ್ರಮದಲ್ಲಿ ಉ.ಕ. ಜನರು ನಲಿದು ಸಡಗರಿಸಿದರು.
ಪ್ರತಿ ವರ್ಷವೂ ದಸರಾ ಬಳಿಕ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ವಿಜಯದಶಮಿ ನಿಮಿತ್ತ ವೇದಿಕೆಯಲ್ಲಿ ಬನ್ನಿಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭಿಕರೆಲ್ಲರೂ ಸಹೋದರತ್ವ ಮತ್ತು ಪ್ರೀತಿ ಸಂಕೇತವಾದ ಬನ್ನಿಯನ್ನು ವಿನಿಮಯ ಮಾಡಿಕೊಂಡರು.
ವೃತ್ತಿ, ಪ್ರವೃತ್ತಿ ಸೇರಿದಂತೆ ಇನ್ನಿತರ ಕಾರಣಕ್ಕೆ ಉತ್ತರ ಕರ್ನಾಟಕದಿಂದ ಬಂದಿರುವ ಬಂಧುಗಳು ಇಲ್ಲಿ ನೆಲೆನಿಂತು ಭವಿಷ್ಯ ರೂಪಿಸಿಕೊಂಡಿದ್ದಾರೆ. ಆದರೆ, ಇವರ‌್ಯಾರೂ ಮೂಲ ನೆಲೆಯನ್ನು ಮರೆತಿಲ್ಲ. ಅಲ್ಲಿಯ ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರವನ್ನೂ ಬಿಟ್ಟಿಲ್ಲ. ಅವರ ಮಾತಿನಿಂದ ಉತ್ತರ ಕರ್ನಾಟಕ ಭಾಷಾ ಸೊಗಡು ಸಹ ಕುಂದಿಲ್ಲ.
ಇದನ್ನೆಲ್ಲ ಈಗಲೂ ಉಳಿಸಿಕೊಂಡು, ತಮ್ಮ ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ ಎಂಬುದು ಈ ಕಾರ್ಯಕ್ರಮದಲ್ಲಿ ಅಭಿವ್ಯಕ್ತವಾಯಿತು. ಬಹಳ ದಿನಗಳ ಬಳಿಕ ಭೇಟಿಯಾದ ತಮ್ಮ ಸೀಮೆಯ ಬಂಧುಗಳೊಂದಿಗೆ ಹರಟೆ, ಹಾಸ್ಯ, ಮಾತುಕತೆಯೊಂದಿಗೆ ಬೆರೆತರು.
ರಾಜಶೇಖರ್ ಜವಳಗಿ ಮತ್ತು ಮೀನಾಕ್ಷಿ ತಂಡದವರು ಸುಗಮ ಸಂಗೀತ, ಕನ್ನಡ ಚಲನಚಿತ್ರಗಳ ಜನಪ್ರಿಯ ಗೀತೆಗಳನ್ನು ಸೊಗಸಾಗಿ ಪ್ರಸ್ತುತಪಡಿಸಿದರು. ಗಾಯಕರಾದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಸದಾಶಿವ ಚಟ್ನಿ, ನೆಸ್ಲೆ ಕಂಪನಿಯ ಮ್ಯಾನೇಜರ್ ಗೋಪಾಲಕೃಷ್ಣ, ಶಿಕ್ಷಕಿ ರೂಪಾ ನಾಯಕ್, ಜೆಎಸ್‌ಎಸ್ ಆಯುರ್ವೇದಿಕ ಕಾಲೇಜಿನ ವಿದ್ಯಾರ್ಥಿನಿ ಶಿಪಾಲಿ ನಾಯಕ್, ವಕೀಲೆ ಅರಾಧನ್, ಸುರೇಶ್, ಮೋಹನ್ ಅವರು ವಿವಿಧ ಗೀತೆಗಳನ್ನು ಹಾಡುವ ಮೂಲಕ ನೆರೆದವರನ್ನು ರಂಜಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ರಮೇಶ್ ಭೀಮರಾವ್ ಕುಲಕರ್ಣಿ, ಸಂಘದ ಗೌರವಾಧ್ಯಕ್ಷ ಎಸ್.ಆರ್.ಪಾಟೀಲ್, ಅಧ್ಯಕ್ಷ ಪಿ.ವಿ.ಅವರಾಧಿ, ಕಾರ್ಯಾಧ್ಯಕ್ಷ ಪ್ರಮೋದ ಚಿಕ್ಕಮಣ್ಣೂರ, ಉಪಾಧ್ಯಕ್ಷ ಡಾ.ಬಸವರಾಜ ಜಿ.ಸಗರ, ಪ್ರಧಾನ ಕಾರ್ಯದರ್ಶಿ ಸಿದ್ದರಾಮು ವೈ ಶಿವನಾಯ್ಕರ್, ಸಾಂಸ್ಕೃತಿಕ ಕಾರ್ಯದರ್ಶಿ ಅಶೋಕ ಯಂಡಿಗೇರಿ, ಸಹಕಾರ್ಯದರ್ಶಿ ಅಮೀನ್ ಪಟೇಲ್, ಜಂಟಿ ಕಾರ್ಯದರ್ಶಿ ಕೆ.ಟಿ.ಯತ್ನಟ್ಟಿ, ಖಜಾಂಚಿ ಸಿದ್ದಲಿಂಗಪ್ಪ ಆರ್.ಪಾಟೀಲ್ ಇನ್ನಿತರರು ಪಾಲ್ಗೊಂಡಿದ್ದರು.