ಶಿವಾನುಭವದಲ್ಲಿ ಪಾಲ್ಗೊಳ್ಳುವುದರಿಂದ ಮನಸು ನಿರ್ಮಲ

1NRGL2 SHIVANUBHAVA
Published on

ನರೇಗಲ್ಲ: ಶಿವಾನುಭವದಲ್ಲಿ ಪಾಲ್ಗೊಳ್ಳುವುದರಿಂದ ಮನಸು ನಿರ್ಮಲವಾಗುತ್ತದೆ. ಅಲ್ಲದೆ, ಮನುಷ್ಯನಲ್ಲಿ ನೈತಿಕ ಬಲ ಹೆಚ್ಚಾಗುತ್ತದೆ ಎಂದು ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ನಡೆದ 52ನೇ ಶಿವಾನುಭವಗೋಷ್ಠಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಇತ್ತೀಚೆಗೆ ಮಾನವರಲ್ಲಿ ನೈತಿಕತೆ ಕಡಿಮೆಯಾಗುತ್ತಿದೆ. ಈ ನೈತಿಕತೆಯನ್ನು ಜನರಲ್ಲಿ ಬಿತ್ತಲು, ನೈತಿಕ ಶಿಕ್ಷಣದ ಅರಿವನ್ನು ಮಕ್ಕಳಲ್ಲಿ ಬೆಳೆಸಲು ಈ ಶಿವಾನುಭವ ಪ್ರಾರಂಭಿಸಲಾಗಿದೆ. ಶಾಲೆಯಲ್ಲಿ ಈ ಹಿಂದೆ ನೈತಿಕ ಶಿಕ್ಷಣದ ಅವಧಿಗಳಿದ್ದವು. ಆದರೆ ಈಗ ಅಂತಹ ಅವಧಿಗಳು ಶಾಲೆಗಳಲ್ಲಿ ಕಾಣುತ್ತಿಲ್ಲ. ಇಲ್ಲಿನ ಈ ಶಿವಾನುಭವದಲ್ಲಿ ಪಾಲ್ಗೊಳ್ಳುವುದರಿಂದ ಎಲ್ಲರೂ ನೈತಿಕ ಶಿಕ್ಷಣದ ಮಹತ್ವವನ್ನು ಅರಿಯಲು ಸಹಾಯಕವಾಗುತ್ತದೆ ಎಂದರು.

ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಮಾತನಾಡಿ, ಮಕ್ಕಳು ಚಿಕ್ಕಂದಿನಿಂದಲೇ ಅಧ್ಯಾತ್ಮ ಬೆಳೆಸಿಕೊಳ್ಳಲು ಮನಸು ಮಾಡಬೇಕು. ನಿತ್ಯವೂ ವಚನಗಳನ್ನು ಪಠಿಸುವ, ಹಿರಿಯರ ಮಾತುಗಳನ್ನು ಗೌರವಿಸುವ ಗುಣಗಳನ್ನು ಕಲಿಯಬೇಕು. ಮಕ್ಕಳಲ್ಲಿ ಈ ಗುಣಗಳು ಮೂಡುವಂತೆ ಮಾಡುವಲ್ಲಿ ತಾಯಂದಿರ ಶ್ರಮ ಬಹಳಷ್ಟಿದೆ. ಇದರಿಂದ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಮಕ್ಕಳು ಸಂಸ್ಕಾರವಂತರಾದರೆ ಅದೇ ನಿಮ್ಮ ಜೀವನಕ್ಕೊಂದು ದೊಡ್ಡ ಸಂಪತ್ತು. ಕೇವಲ ಅಂಕ ಗಳಿಕೆಗೆ ಜೋತು ಬೀಳದೆ ಮಾನವೀಯ ಮೌಲ್ಯಗಳನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಲು ಇಂತಹ ಶಿವಾನುಭವಗಳು ಸಹಾಯಕವಾಗುತ್ತವೆ. ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನಿವೃತ್ತ ಪ್ರಥಮ ದರ್ಜೆ ಸಹಾಯಕ ಎಸ್. ಕೆ. ಪಾಟೀಲರನ್ನು ಸನ್ಮಾನಿಸಲಾಯಿತು. ಆಡಳಿತಾಧಿಕಾರಿ ಎನ್.ಆರ್. ಗೌಡರ, ಶಿಕ್ಷಕ ಎಂ. ಎ. ಹಿರೇವಡೆಯರ, ಪ್ರಾಚಾರ್ಯ ವೈ.ಸಿ. ಪಾಟೀಲ, ಎಫ್.ಎನ್. ಹುಡೇದ, ಎಂ.ಎಸ್. ದಢೇಸೂರಮಠ, ಡಿ.ಎ. ಅರವಟಗಿಮಠ, ಮಲ್ಲಿಕಾರ್ಜುನಪ್ಪ ಮೆಣಸಿಗಿ, ಸಿ.ಐ. ಮರಡಿಮಠ, ಬಿ.ಜಿ. ಶಿರ್ಸಿ, ಮೃತ್ಯುಂಜಯ ಹಿರೇಮಠ, ತೋಟಪ್ಪ ಆಡೂರ, ಬಸಪ್ಪ ಸಂಗಳದ, ಹೇಮಂತ ಹಾದಿಮನಿ, ಸಂಗಯ್ಯ ಪ್ರಭುಸ್ವಾಮಿಮಠ, ಆರ್.ಕೆ. ಬಾಗವಾನ, ಇತರರಿದ್ದರು. ಎಸ್.ಎನ್. ಹೂಲಗೇರಿ, ಡಾ. ಕಲ್ಲಯ್ಯ ಹಿರೇಮಠ ಹಾಗೂ ಶಿಕ್ಷಕ ಎಸ್. ಬಿ. ಬೂದಿಹಾಳ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net