

ಕುಷ್ಟಗಿ: ಚಳಿಯಿಂದ ತಪ್ಪಿಸಿಕೊಳ್ಳಲು ವಿದೇಶಗಳಿಂದ ಹಾರಿ ಬಂದ ಹಕ್ಕಿಗಳು ತಾಲೂಕಿನ ನಿಡಶೇಸಿ ಕೆರೆಯಲ್ಲಿ ಆಶ್ರಯ ಪಡೆದಿವೆ. ಹಿಮಾಲಯ ಪರ್ವತ ದಾಟಿ ಸುಮಾರು 6ಸಾವಿರ ಕಿಮೀ. ಕ್ರಮಿಸಿ ಬಂದಿರುವ ವಿವಿಧ ಹಕ್ಕಿಗಳ ಕಲರವ ದಾರಿ ಹೋಕರನ್ನು ಆಕರ್ಷಿಸುತ್ತಿವೆ.
ಟಿಬೆಟ್, ಚೀನಾ, ಮಂಗೋಲಿಯಾದಿಂದ ವಲಸೆ ಬಂದ ಹಕ್ಕಿಗಳಿಗೆ ನಿಡಶೇಸಿ ಕೆರೆ ಪ್ರಶಸ್ತವಾಗಿದೆ. ಕೆರೆ ನೀರಿನಲ್ಲಿ ವಿಹರಿಸುವ ಹಕ್ಕಿಗಳು ಸುತ್ತಲೂ ಇರುವ ಕೃಷಿ ಜಮೀನುಗಳಲ್ಲಿನ ಬೆಳೆಗಳ ಧಾನ್ಯ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಸದ್ಯ ಕೆರೆಯಲ್ಲಿ 3ಸಾವಿರಕ್ಕೂ ಹೆಚ್ಚು ಪಟ್ಟೆತಲೆ ಹೆಬ್ಬಾತುಗಳು ಕಂಡುಬರುತ್ತಿವೆ.
ಇವುಗಳ ಜತೆ ಕಂದುಬಾತು, ಬುಗುಟು ಕೊಕ್ಕಿನ ಬಾತು, ಸೂಜಿ ಬಾಲದ ಬಾತು, ಚಲುಕ ಬಾತು, ರೆಡ್ ಶಾಂಕ್ ಹೆಸರಿನ ಹಕ್ಕಿಗಳು ಕೆರೆಯಲ್ಲಿ ಕಂಡುಬರುತ್ತಿವೆ. ವಲಸೆ ಹಕ್ಕಿಗಳ ಜತೆಗೆ ಸ್ಥಳೀಯ ಹಕ್ಕಿಗಳಾದ ಬಣ್ಣದ ಕೊಕ್ಕರೆ ಕೆಂಬರ್ಲು, ಚಮಚ ಕೊಕ್ಕರೆ, ಕರಿಪಟ್ಟಿ ಗೊರವ, ಸಣ್ಣ ಚಿಟುವಾ, ಕೆಸರು ಗೊರವಾ, ನೀರು ಗೊರವಾ, ಟಿಟ್ಟಿಬಾ, ಮೆಟ್ಟುಗಾಲು ಹಕ್ಕಿ, ಉಲ್ಲಂಕಿ, ಬಂಡೆಗೊರವಾ, ಮರಳುಪೀಪಿ, ನದಿರಿವಾ, ಮಿಂಚುಳ್ಳಿ ಹಕ್ಕಿಗಳೂ ಕೆರೆಯಲ್ಲಿ ಕಾಣಿಸುತ್ತಿವೆ.
ರಾಜ್ಯದ ಎರಡನೇ ಕೆರೆ: ಸಾಮಾನ್ಯವಾಗಿ ನವೆಂಬರ್‌ನಲ್ಲಿ ವಿವಿಧೆಡೆಯಿಂದ ಹಕ್ಕಿಗಳು ವಲಸೆ ಬರುತ್ತವೆ.
ನವೆಂಬರ್, ಡಿಸೆಂಬರ್‌ಗಿಂತ ಜನವರಿಯಲ್ಲಿ ಹೆಚ್ಚು ಹಕ್ಕಿಗಳು ಕಂಡುಬರುತ್ತಿವೆ. ಲಕ್ಷ್ಮೇಶ್ವರ ತಾಲೂಕಿನ ಮಾಗಡಿ ಕೆರೆ ವಲಸೆ ಹಕ್ಕಿಗಳನ್ನು ಆಕರ್ಷಿಸುವ ರಾಜ್ಯದ ಮೊದಲ ಕೆರೆಯಾದರೆ ನಿಡಶೇಸಿ ಕೆರೆ ಎರಡನೆಯದಾಗಿದೆ. ನೀರು, ಪೊದೆಗಳ ರಕ್ಷಣೆ, ಸುತ್ತಲಿನ ಕೃಷಿ ಜಮೀನು ಇರುವುದು ಹಕ್ಕಿಗಳ ವಾಸಕ್ಕೆ ಪೂರಕವಾಗಿದೆ. ಇದರ ಜತೆಗೆ ಗೂಡು ಕಟ್ಟಲು ಕರಿಜಾಲಿ, ಆಹಾರಕ್ಕೆ ಹಣ್ಣು ಬಿಡುವ ಗಿಡಗಳನ್ನು ನೆಟ್ಟರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಪಕ್ಷಿ ತಜ್ಞ ಅಮರೇಗೌಡ ಪಾಟೀಲ್ ಜಾಲಿಹಾಳ ಹೇಳಿದರು.