

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಸರಸ್ವತಿ ಸಂಗೀತ ವಿದ್ಯಾಲಯವು ಹಮ್ಮಿಕೊಂಡಿದ್ದ ಯಕ್ಷ ರೂಪಕ ಹಾಗೂ ತಾಳಮದ್ದಲೆ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶ ಪಡೆಯಿತು.
ನಗರದ ಆಲೂರು ವೆಂಕಟರಾವ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಳಮದ್ದಲೆ ಮಾತಿನ ಮಂಟಪ ನಿರ್ಮಾಣ ಮಾಡಿತು.
ಹನುಮ ಜಯಂತಿ ಹಿನ್ನೆಲೆಯಲ್ಲಿ ನಡೆದ ಶರಸೇತು ಬಂಧ ತಾಳಮದ್ದಲೆಯಲ್ಲಿ ವಾಗ್ಮಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಹನುಮಂತನ ಪಾತ್ರದಲ್ಲಿ ಮಿಂಚಿದರೆ, ಅರ್ಜುನನ ಪಾತ್ರದಲ್ಲಿ ವಿದ್ವಾನ್ ನಾರಾಯಣ ದೇಸಾಯಿ, ವಿಪ್ರನಾಗಿ ವಿದ್ವಾನ್ ವಿನಾಯಕ ಭಟ್ಟ ಗಮನ ಸೆಳೆದರು.
ಅತ್ಯಂತ ಎಳೆಯ ವಸ್ಸಿನಲ್ಲಿ ನಾಡಿನ ಗಮನ ಸೆಳೆದ ಯಕ್ಷ ಕಿಶೋರಿ ತುಳಸಿ ಹೆಗಡೆ, ವಿಶ್ವಶಾಂತಿ ಸರಣಿಯ ಹತ್ತನೇ ಕಲಾಕುಸುಮ ವಿಶ್ವಾಭಿಗಮನಮ್ ಮೂಲಕ ಭಗವಾನ್ ಕೃಷ್ಣನ ಲೀಲೆಗಳ ಅನಾವರಣ ಮಾಡಿದಳು.
ವಿದುಷಿ ರಾಧಾ ದೇಸಾಯಿ, ಇತರರು ಇದ್ದರು. ಸಂಸ್ಥೆ ಅಧ್ಯಕ್ಷ ಉದಯ ದೇಸಾಯಿ ಸ್ವಾಗತಿಸಿದರು. ರವಿ ಕುಲಕರ್ಣಿ ವಂದಿಸಿದರು.