

ತುಮಕೂರು: ಜಿಲ್ಲಾಡಳಿತದ ವತಿಯಿಂದ ಸಂತಶ್ರೇಷ್ಠ ಕನಕದಾಸರ 537ನೇ ಜಯಂತಿ ಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು. ಕಾಳಿದಾಸ ವಿದ್ಯಾವರ್ಧಕ ಸಂಘ ಮತ್ತು ಜಿಲ್ಲೆಯ ಕುರುಬರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಗೈರಾಗಿದ್ದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಚಾಲನೆ ನೀಡಿ ಮತನಾಡಿ, ಕನಕದಾಸರು ಕೀರ್ತನೆ ಮತ್ತು ವಚನಗಳ ಮೂಲಕ ವೈಚಾರಿಕತೆಗೆ ಹೊಸ ಅರ್ಥ ತಂದು ಕೊಟ್ಟರು ಎಂದು ಸ್ಮರಿಸಿದರು.
ಕನಕದಾಸರ ನಂಬಿಕೆಯಂತೆ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ನಮ್ಮ ಸುತ್ತಮುತ್ತಲಿನ ಜನ ಗಮನಿಸುತ್ತಿರುತ್ತಾರೆ ಎಂಬ ಎಚ್ಚರಿಕೆ ಇರಬೇಕು. ಯಾವುದೇ ಕೆಲಸವಾಗಲಿ ಶ್ರದ್ಧೆ- ಭಕ್ತಿಯಿಂದ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರಲ್ಲದೆ, ಕನಕದಾಸರ ಜೀವನ ಮೌಲ್ಯಗಳನ್ನು ನಾವೆಲ್ಲರೂ ಸ್ಮರಿಸಿ ಪಾಲಿಸಬೇಕು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕನಕದಾಸರು ಕವಿಯಾಗಿ, ಸಂತನಾಗಿ, ಸಮಾಜ ಸುಧಾರಕರಾಗಿ ಸಾರ್ವತ್ರಿಕ ಮೌಲ್ಯಗಳನ್ನು ತಿಳಿಸಿದರು. ಕನಕದಾಸರ ಸಾರ್ವಕಾಲಿಕ ಸತ್ಯಗಳನ್ನು ನಾವೆಲ್ಲರೂ ತಿಳಿದು ಬದುಕಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ದಾಸಸಾಹಿತ್ಯ ಮತ್ತು ವಚನಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡಿದ ಶ್ರೇಷ್ಠ ಸಂತ. ಕನಕದಾಸರ ಸಾಹಿತ್ಯದ ವಿಚಾರಧಾರೆಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಜನಸಾಮಾನ್ಯರೊಂದಿಗೆ ಬದುಕಿ ಜನರಿಗೆ ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಸಿದ ಕನಕದಾಸರ ಕೀರ್ತನೆಗಳು ಈಗಲೂ ಪ್ರಸ್ತುತವಾಗಿವೆ ಎಂದರು.
ಲೇಖಕಿ ಡಾ.ಎನ್.ಆರ್.ಲಲಿತಾಂಬ ವಿಶೇಷ ಉಪನ್ಯಾಸ ನೀಡಿ, ಬಿರುದು-, ಬಾವಲಿಗಳಿಗಾಗಿ ಗೀತೆಗಳನ್ನು ರಚಿಸದೇ ಜನರ ನೋವು- ನಲಿವುಗಳನ್ನೇ ಕೀರ್ತನೆಗಳನ್ನಾಗಿ ರಚಿಸುವ ಮೂಲಕ ಸದಾಕಾಲ ಜನಮಾನಸದಲ್ಲಿ ಉಳಿದುಕೊಂಡರು ಕನಕದಾಸರು. ಕನಕದಾಸರ ಕೀರ್ತನೆಗಳು ಸಹಿಷ್ಣತೆ ಬದುಕು ಕಟ್ಟಿಕೊಳ್ಳಲು, ಸಹಬಾಳ್ವೆಯ ಜೀವನ ನಡೆಸಲು ಸ್ಫೂರ್ತಿದಯಕವಾಗಿವೆ. ಜಾತಿ, ಮತ, ಧರ್ಮ, ಕುಲಗಳ ಬಗ್ಗೆ ಕನಕ ದಾಸರು ಕೀರ್ತನೆಗಳ ಮೂಲಕ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಬೇಕು. ಸಮಾಜದಲ್ಲಿ ಬದಲಾವಣೆಗಳನ್ನು ತರಲು ಕನಕದಾಸರ ತತ್ವಾದರ್ಶ ಪಾಲಿಸುವ ಮೂಲಕ ಪ್ರಬುದ್ಧರಾಗಬೇಕು ಎಂದು ನೀಡಿದರು.
ತುಮಕೂರು ತಾಲೂಕು ಡಿ.ಎಂ.ಪಾಳ್ಯ ಶ್ರೀಗುರುರೇವಣಸಿದ್ದೇಶ್ವರ ಮಠದ ಶ್ರೀಬಿಂಧುಶೇಖರ ಒಡೆಯರ್ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಭೀಮರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಕನಕ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುನಿತಾ, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಕ್ಷಿ$್ಮನರಸಿಂಹರಾಜು ಇದ್ದರು.
ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮರಳೂರು ಟಿ.ಎಚ್.ಹನುಮಂತಪ್ಪ, ಲಿಂಗಾಪುರದ ಶಿವಣ್ಣ, ಹರಳಕಟ್ಟೆಯ ಚಿಕ್ಕಲಿಂಗಯ್ಯ, ಸಮಾಜಸೇವೆ ಕ್ಷೇತ್ರದಲ್ಲಿ ಮೆಳೇಕೋಟೆಯ ಎಂ.ಪಿ.ರಮೇಶ್, ಕಾಳಮ್ಮನಗುಡಿ ಬೀದಿಯ ಸಿ.ಎಲ್.ರವಿಕುಮಾರ್, ತುಮಕೂರಿನ ಆರ್.ತಿಪ್ಪೇಸ್ವಾಮಿ, ವೈ.ಎನ್.ಹೊಸಕೋಟೆ ಪೂಜಾರಿ ಚೌಡಪ್ಪ, ವೈದ್ಯಕಿಯ ಕ್ಷೇತ್ರದಲ್ಲಿ ಉಪ್ಪಾರಹಳ್ಳಿಯ ಡಾ.ಶಶಿಧರ್, ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಎಂ.ಪಿ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.