ಬ್ರಹ್ಮಶ್ರೀ ಸಂದೇಶದಲ್ಲಿ ಮನುಷ್ಯ ಧರ್ಮದ ಸಾರ ಅಡಕ: ಡಾ.ಎಂ.ಮೋಹನ್ ಆಳ್ವ

Mbd_Alvas-1
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಸಮಾಜ ಸುಧಾರಕನಾರಾಯಣ ಗುರು ಒಂದು ಜಾತಿ ಧರ್ಮದ ಗುರುವಲ್ಲ. ಅವರು ಹೇಳಿದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ. ಚತುರ್ವರ್ಣ ಕರಾಳ ವ್ಯವಸ್ಥೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ನುಡಿದರು.

ಯುವವಾಹಿನಿ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಶ್ರೀ ನಾರಾಯಣ ಗುರುಗಳ ಭಾವಚಿತ್ರ ರಚನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ‘ಗುರು ಸ್ಮರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಜಯಂತಿಗಳು ಜಾತಿಯ ಆಧಾರದಲ್ಲಿ ನಡೆಯುತ್ತಿರುವುದು ವಿಷಾದನೀಯ. ಒಂದೇ ಜಾತಿ, ಒಂದೇ ಕುಲ ಎಂದು ಜಗತ್ತಿಗೆ ಸಾರಿದ ಶ್ರೀ ನಾರಾಯಣ ಗುರು ಅವರ ತತ್ವಗಳು ಸಾರ್ವಕಾಲಿಕವಾಗಿದ್ದು, ಅವರನ್ನು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಸಬಾರದು. ಅವರು ಹಾಕಿಕೊಟ್ಟ ಆದರ್ಶ ತತ್ವಗಳು, ಸಮಾಜ ಸುಧಾರಣೆಯ ದಾರ್ಶನಿಕ ನಿಲುವುಗಳು ಜಗತ್ತಿಗೆ ಆದರ್ಶಪ್ರಾಯವಾದವುಗಳೆಂದು ನುಡಿದರು.

ಶಾಸಕ ಉಮಾನಾಥ ಎ. ಕೋಟ್ಯಾನ್ ಮಾತನಾಡಿ, ನಾರಾಯಣಗುರುಗಳು ಯಾವುದೇ ಸಮುದಾಯ, ಸಮಾಜ, ವರ್ಗಕ್ಕೆ ಸೇರಿದವರಲ್ಲ. ಅವರು ಲೋಕ ಸಂತ. ಅವರ ಬಳಿಯಿಂದ ಮಹಾತ್ಮ ಗಾಂದಿ, ರವೀಂದ್ರನಾಥ್ ಟಾಗೋರ್ ಮಾರ್ಗದರ್ಶನ ಪಡೆಯುತ್ತಿದ್ದರು ಎಂದು ತಿಳಿಸಿದರು.

ಯುವವಾಹಿನಿ ಮೂಡುಬಿದಿರೆ ಸಮಿತಿ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್ ಮಾತನಾಡಿ, ನಾರಾಯಣಗುರುಗಳ ಕುರಿತು ಏರ್ಪಡಿಸಿದ್ದ ಇಂದಿನ ಸ್ಪರ್ಧೆಗೆ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳು ಹೆಸರು ನಮೂದಿಸಿಕೊಂಡು ಪಾಲ್ಗೊಳ್ಳುತ್ತಿರುವುದು ಸಂತೋಷ ವಿಷಯ ಎಂದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಹರೀಶ್ ಕೆ. ಪೂಜಾರಿ, ನಿಶ್ಮಿತಾ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ.ಎಂ., ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಉಪಸ್ಥಿತರಿದ್ದರು.

ಹನಿ ಆನಂದ್ ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಸಮಿತಿ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು.

ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಶ್ರೀ ನಾರಾಯಣ ಗುರುಗಳ ಭಾವಚಿತ್ರ ರಚನೆಗೆ 700 ವಿದ್ಯಾರ್ಥಿಗಳು, ಪ್ರಬಂಧ ಸ್ಪರ್ಧೆಗೆ 162 ಹಾಗೂ ಹಾಗೂ ಭಾಷಣ ಸ್ಪರ್ಧೆಗೆ 60 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 925 ವಿದ್ಯಾರ್ಥಿಗಳು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net