

ಸಿದ್ದಾಪುರ: ಸಿದ್ದಾಪುರದಂತಹ ಹಸಿರಾದ ಕಾಡಿನಿಂದ ಕಾಂಕ್ರೀಟ್ ಕಾಡಿಗೆ ವರ್ಗವಾಗಿ ಹೋಗುತ್ತಿದ್ದೇನೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನನ್ನನ್ನು ಗೌರವಿಸಿದ್ದೀರಿ ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ಬೆಂಗಳೂರಿನ ನ್ಯಾಯಾಲಯಕ್ಕೆ ಹಿರಿಯ ನ್ಯಾಯಾಧೀಶರಾಗಿ ತೆರಳುತ್ತಿರುವ ಜಿ.ತಿಮ್ಮಯ್ಯ ಹೇಳಿದರು.
ಪಟ್ಟಣದ ಬಾಲಭವನದಲ್ಲಿ ತಾಲೂಕಿನ ವಿವಿಧ ಸಂಘಸಂಸ್ಥೆಗಳು ಆಯೋಜಸಿದ್ದ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಿದ್ದಾಪುರದ ಭುವನಗಿರಿ ಭುವನೇಶ್ವರಿಯ ಪವಿತ್ರ ತಾಣದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕನ್ನಡದಲ್ಲಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ನನಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ದೊರೆಯಿತು.
ಇದೀಗ ಇದೇ ಮಣ್ಣಿನಲ್ಲಿ ಸೇವೆಯಲ್ಲಿರುವಾಗಲೇ ಪದೋನ್ನತಿ ದೊರೆತಿದೆ. ಇಂತಹ ಸ್ಥಳದ ನೆನಪನ್ನು ಸದಾ ಹಸಿರಾಗಿರಿಕೊಳ್ಳುತ್ತೇನೆ ಎಂದರು.
ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಮಾತನಾಡಿ, ಮಾನವೀಯ ಮೌಲ್ಯಗಳ ಜತೆಯಲ್ಲಿ ವೃತ್ತಿ ಬದುಕನ್ನು ನಡೆಸುತ್ತಿರುವ ಜಿ.ತಿಮ್ಮಯ್ಯನಂತಹ ವ್ಯಕ್ತಿಗಳು ಸಮಾಜದಲ್ಲಿ ವಿರಳವಾಗಿ ಸಿಗುತ್ತಾರೆ. ಅವರ ಸಾಹಿತ್ಯಾಭಿರುಚಿ, ಸಾಂಸ್ಕೃತಿಕ ಅಭಿರುಚಿಗಳನ್ನು ಗಮನಿಸಿದಾಗ ಜ್ಞಾನ, ಧರ್ಮ, ನ್ಯಾಯ, ನೀತಿಗಳ ಸಂಗಮದಂತೆ ಕಂಡು ಬರುತ್ತಾರೆ ಎಂದರು.
ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಅಧ್ಯಕ್ಷತೆವಹಿಸಿ ಮಾತನಾಡಿ ಮಾನವೀಯತೆ ಹೊಂದಿರುವ ನ್ಯಾಯಾಧೀಶರಾದ ಜಿ.ತಿಮ್ಮಯ್ಯ ಅವರನ್ನು ನಮ್ಮೂರಿನಿಂದ ಬೀಳ್ಕೊಡುತ್ತಿರುವುದು ದು:ಖದಾಯಕವಾದರೂ ಅವರಿಗೆ ಪದೋನ್ನತಿ ದೊರೆತಿದ್ದು ಸಂತಸವನ್ನು ನೀಡುತ್ತದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ಲಯನ್ಸ ಅಧ್ಯಕ್ಷ ಆರ್.ಎಂ.ಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಸೇವಾ ಸಂಕಲ್ಪ ಟ್ರಸ್ಟ ಅಧ್ಯಕ್ಷ ಪಿ.ಬಿ.ಹೊಸೂರ, ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್, ಸ್ಪಂದನ ಸೇವಾ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ನಾಯ್ಕ, ಶಿವಮೊಗ್ಗಾ ನಗರಪಾಲಿಕೆಯ ಹಿರಿಯ ಅಧಿಕಾರಿ ತುಷಾರ ಹೊಸೂರ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರಭದ್ರ ಪಾಟೀಲ ಇತರರಿದ್ದರು.
ಕೆಕ್ಕಾರ ನಾಗರಾಜ ಭಟ್ಟ ಸ್ವಾಗತಿಸಿದರು. ಪ್ರಕಾಶ ಹೊಸೂರ ವಂದಿಸಿದರು ಪೊ›.ರತ್ನಾಕರ ನಾಯ್ಕ ನಿರ್ವಹಿಸಿದರು.