ಸ್ವಾತಂತ್ರೃ ಹೋರಾಟಗಾರರ ಸ್ಮರಣೆ ಅಗತ್ಯ

H12-ICHAGERI_SAKSHYACHITRA
Published on

ಹುಬ್ಬಳ್ಳಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ ಹೋರಾಟಗಾರರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಹೇಳಿದರು.

ನಗರದ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮೂರುಸಾವಿರಪ್ಪ ಈಚಗೇರಿ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಸೇವೆಗೆ ಮಡಿದ ವೀರ ಯೋಧರ ಸಾಕ್ಷ್ಯಚಿತ್ರಗಳು ಇನ್ನಷ್ಟು ಹೊರಬರಬೇಕು. ಇಂದಿನ ಪೀಳಿಗೆಗೆ ದೇಶಾಭಿಮಾನ ಬೆಳೆಸಿಕೊಳ್ಳಲು ಮಾರ್ಗದರ್ಶನವಾಗಬೇಕು ಎಂದರು.

ಆದರ್ಶ ಕಾಲೇಜ್ ನಿರ್ದೇಶಕ ಬಿ.ಸಿ. ಗೌಡರ ಮಾತನಾಡಿ, ಈಚಗೇರಿಯವರು ದೇಶಕ್ಕಾಗಿ ಮಾಡಿದ ಬಲಿದಾನ ದೊಡ್ಡದು. ಅವರ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು. ಸ್ಮಾರಕದ ಹತ್ತಿರ ಪುತ್ಥಳಿ ನಿರ್ಮಾಣ ಮಾಡಲು ಸರ್ಕಾರವನ್ನು ಒತ್ತಾಯಿಸೋಣ ಎಂದರು.

ಹುಬ್ಬಳ್ಳಿ ಬಣಗಾರ ಸಮಾಜದ ಅಧ್ಯಕ್ಷ ಅನಿಲ ಕವಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂರುಸಾವಿರಪ್ಪ ಈಚಗೇರಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲು ಶ್ರಮಿಸಿದ ನವಋತು ಕ್ರಿಯೇಷನ್ ನಿರ್ದೇಶಕ ನವೀನ ಶೆಟ್ಟರ್ ಹಾಗೂ ಛಾಯಾಗ್ರಾಹಕ ವರುಣ ಶಿಗ್ಲಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಜಡೆಯಶಂಕರಲಿಂಗ ಟ್ರಸ್ಟ್ ಕಮಿಟಿಯ ಚೀಫ್ ಟ್ರಸ್ಟಿಗಳಾದ ಮಲ್ಲೇಶಪ್ಪ ಗರಗ, ಷಣ್ಮುಖಪ್ಪ ಹೂಲಿ, ನವಿಲೆ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ ಚೆನ್ನಿ, ಶಿವಕುಮಾರ ಈಚಗೇರಿ, ದಯಾನಂದ ಈಚಗೇರಿ, ಇತರರು ಇದ್ದರು. ಶ್ರೀಶೈಲ ಜೋಡಳ್ಳಿ ಸ್ವಾಗತಿಸಿ, ನಿರೂಪಸಿದರು. ವೀರಣ್ಣ ಹೂಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net