ಡಾ.ಬಿ.ಯಶೋವರ್ಮ ನೆನಪು ಸ್ಫೂರ್ತಿ

Bel_Yashovarma
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆ ಶ್ರೀ ಧ.ಮಂ. ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ಒಂದು ವಾರದ ವಾರ್ಷಿಕ ವಿಶೇಷ ಶಿಬಿರ ಬಂಗಾಡಿಯ ಇಂದಬೆಟ್ಟು (ಕಲ್ಲಾಜೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು, ಇದರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ನಿಕಟಪೂರ್ವ ಕಾರ್ಯದರ್ಶಿ ದಿ.ಡಾ.ಬಿ.ಯಶೋವರ್ಮ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.

ನಾವೂರಿನ ಆರೋಗ್ಯ ಕ್ಲಿನಿಕ್‌ನ ವೈದ್ಯ ಪ್ರದೀಪ್ ನಾವೂರು ಮಾತನಾಡಿ, ಅಹಂಕಾರ ಭಾವ ಎಂದಿಗೂ ನಮ್ಮಲ್ಲಿ ಬರಬಾರದು ಎಂಬ ಗೀತೆಯ ಸಾರವನ್ನು ಆದರ್ಶವಾಗಿ ತೆಗೆದುಕೊಂಡು ಜೀವನದಲ್ಲಿ ಆಳವಾಗಿ ಅಳವಡಿಸಿಕೊಂಡಿದ್ದ ವ್ಯಕ್ತಿ ಡಾ.ಬಿ.ಯಶೋವರ್ಮ. ಯಶೋವರ್ಮ ಅವರು ಸದಾ ಹಸನ್ಮುಖಿಯಾಗಿದ್ದವರು. ಅವರು ಇಂದು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೇ ಇದ್ದರೂ ಅವರ ನೆನಪುಗಳೇ ನಮಗೆ ಎಂದಿಗೂ ಸ್ಫೂರ್ತಿ. ಅವರು ಬದುಕಿದ ರೀತಿ ನಮಗೆಲ್ಲರಿಗೂ ಆದರ್ಶ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮತ್ತು ಬೆಳ್ತಂಗಡಿ ಲಯನ್ಸ್ ಕ್ಲಬ್ ಕೋಶಾಧಿಕಾರಿ ಅಮಿತಾನಂದ ಹೆಗ್ಡೆ ಮಾತನಾಡಿ, ಯಶೋವರ್ಮ ಅವರದ್ದು ಬಹಳ ದೊಡ್ಡ ವ್ಯಕ್ತಿತ್ವ ಎಂದರು. ಉದ್ಯಮಿ ರಘುರಾಮ ಶೆಟ್ಟಿ ಮಾತನಾಡಿದರು. ಡಾ.ಬಿ.ಯಶೋವರ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್.ಸ್ವಾಗತಿಸಿ, ಸ್ವಯಂಸೇವಕ ವಂಶಿ ನಿರೂಪಿಸಿದರು. ಸ್ವಯಂಸೇವಕಿ ನಿಶಾ ವಂದಿಸಿದರು. ಸ್ವಯಂಸೇವಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗ್ರಾಮ ಸಮೀಕ್ಷೆ ಸಂವಾದ

ಶಿಬಿರದ ಉದ್ಘಾಟನಾ ಸಮಾರಂಭದ ಬಳಿಕ ಗ್ರಾಮ ಸಮೀಕ್ಷೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಉಜಿರೆಯ ಶ್ರೀ ಧ.ಮಂ.ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಧನೇಶ್ವರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರದ ಶೀರ್ಷಿಕೆ ಯೂತ್ ಫಾರ್ ಮೈ ಭಾರತ್-ಯೂತ್ ಫಾರ್ ಡಿಜಿಟಲ್ ಲಿಟ್ರಸಿ ಮಾಹಿತಿ ನೀಡಿದರು. ಯೋಜನಾಧಿಕಾರಿ ಪ್ರೊ.ದೀಪ ಆರ್.ಪಿ.ಉಪಸ್ಥಿತರಿದ್ದರು. ಸ್ವಯಂಸೇವಕರಾದ ಶ್ರೇಯಾಂಕ್ ಸ್ವಾಗತಿಸಿ, ಕವನ ನಿರೂಪಿಸಿ, ಮಧುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net