

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಆಡಳಿತದ ಒಂಬತ್ತು ವರ್ಷದ ಸಾಧನೆಗೆ ಕೈಗನ್ನಡಿಯಾಗಬೇಕಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬೆಂಬಲಿಗರಿಂದಾಗಿ ಉದ್ಘಾಟನೆಗೊಳ್ಳದೇ ಅಂತ್ಯಕಾಣಬೇಕಾಯಿತು..!
ಹೌದು, ಇಲ್ಲಿನ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು ಪ್ರಮುಖ ನಾಯಕರು ಮುಜುಗರಕ್ಕೀಡಾದರಲ್ಲದೇ, ವೇದಿಕೆಯಿಂದ ನಿರ್ಗಮಿಸಬೇಕಾಯಿತು.
ನಿಗದಿತ ಅವಧಿಗಿಂತ ತಡವಾಗಿ ಆರಂಭಗೊಂಡ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೈರಾಗಿದ್ದರು. ಅವರು ಬರುವವರೆಗೂ ಉದ್ಘಾಟನೆ ನೆರವೇರಿಸದಂತೆ ಯತ್ನಾಳ ಬೆಂಬಲಿಗರು ಪಟ್ಟು ಹಿಡಿದರು. ಹೀಗಾಗಿ ಉದ್ಘಾಟನೆ ನೆರವೇರಿಸದೇ ಕೆಲವು ಮುಖಂಡರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಸ್ವಾಗತಿಸಿದ ಬಳಿಕ ಶಾಸಕಿ ಶಶಿಕಲಾ ಜೊಲ್ಲೆ ಭಾಷಣ ಮುಗಿಸುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿ ಯತ್ನಾಳ ಬೆಂಬಲಿಗರು ಬಿಆರ್‌ಪಿ… ಬಿಆರ್‌ಪಿ ಎಂದು ಘೋಷಣೆ ಮೊಳಗಿಸಿದರಲ್ಲದೇ ಮಾಜಿ ಸಚಿವ ಮುರುಗೇಶ ನಿರಾಣಿ, ಸಂಸದ ರಮೇಶ ಜಿಗಜಿಣಗಿ, ಎ.ಎಸ್. ಪಾಟೀಲ ನಡಹಳ್ಳಿ ಮತ್ತಿತರರ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಆಕ್ರೋಶಗೊಂಡ ಮೂವರೂ ನಾಯಕರು ವೇದಿಕೆಯಿಂದ ನಿರ್ಗಮಿಸಿದರು. ಇವರೊಂದಿಗೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಸೇರಿದಂತೆ ಹಲವರು ನಿರ್ಗಮಿಸಿದರು.
ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಕಾರ್ಯಕರ್ತರನ್ನು ಸಮಾಧಾನ ಪಡಿಸಲೆತ್ನಿಸಿದರೂ, ಪೊಲೀಸರು ತಡೆದರೂ ಕ್ಯಾರೆ ಎನ್ನದ ಯತ್ನಾಳ ಬೆಂಬಲಿಗರು ಚಪ್ಪಾಳೆ ತಟ್ಟಿ, ಘೋಷಣೆ ಮೊಳಗಿಸಿದರು. ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೆಲಹೊತ್ತಿನ ಬಳಿಕ ಕಾರ್ಯಕ್ರಮ ಆರಂಭಗೊಂಡಿತಾದರೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಬೆರಳೆಣಿಕೆಯ ನಾಯಕರು ಮಾತ್ರ ಇದ್ದರು. ವೇದಿಕೆ ಬಹುತೇಕ ಖಾಲಿ ಖಾಲಿಯಾಗಿತ್ತು.
ಸಭೆಯಿಂದ ಹೊರನಡೆದ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ನಡಹಳ್ಳಿ ತೀವ್ರ ಆಕ್ರೋಶ ಹೊರಹಾಕಿದರಲ್ಲದೇ ಯತ್ನಾಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ನಡಹಳ್ಳಿ, ನಾವು ಸೋತಿರಬಹುದು ಆದರೆ, ಬಿಜೆಪಿ ಸತ್ತಿಲ್ಲ. ಬಿಜೆಪಿಯನ್ನು ಮತ್ತೆ ಕಟ್ಟಿ ತೋರಿಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಈ ದೇಶದ ಪ್ರಧಾನಿ ಮಾಡುತ್ತೇವೆ. ಅಲ್ಲಿಯರೆಗೆ ಮನೆ-ಮಠ ತೊರೆಯುತ್ತೇವೆ. ಮಡದಿ ಮಕ್ಕಳ ಮುಖ ನೋಡಲ್ಲ ಎಂದು ಸಂಕಲ್ಪಗೈದರು.
ಯಾರನ್ನು ಯಾರು ಸೋಲಿಸಿದ್ದಾರೆ? ಯಾರು ನಾಟಕ ಮಾಡಿದ್ದಾರೆ ಎಂಬುದು ಗೊತ್ತಿದೆ. ಹೇಳಿದರೆ ಬಹಳಷ್ಟು ವಿಷಯಗಳಿವೆ. ಸದ್ಯ ನಾವು ನೋವಿನಲ್ಲಿದ್ದೇವೆ. ನಮ್ಮ ಪಕ್ಷದ ಮಾಜಿ ಸಿಎಂ ಬಂದಿದ್ದಾರೆ. ನಾವೆಲ್ಲ ನಮ್ಮ ನೋವು ಹೇಳಿಕೊಳ್ಳಲು ಇಲ್ಲಿ ಬಂದಿದ್ದೇವೆ. ಆದರೆ, ಇಲ್ಲಿ ನೀವು ಮಾಡುತ್ತಿರುವುದೇನು? ಎಂದು ನಡಹಳ್ಳಿ ಆಕ್ರೋಶ ಹೊರಹಾಕಿದರು.
ನಿಮ್ಮಿಂದಲೇ ರಾಜಕೀಯ ಷಡ್ಯಂತ್ರ ನಡೆದಿದೆ. ಕಾಂಗ್ರೆಸ್ ನಾಯಕರ ಮನೆಯಲ್ಲಿ ಕುಳಿತುಕೊಂಡು ಚರ್ಚೆ ಮಾಡಿ ಸೋಲಿಸುವಂಥದ್ದು ಇನ್ಮುಂದೆ ನಡೆಯಲ್ಲ. ನಾವೆಲ್ಲರೂ ತಾಕತ್ ಇದ್ದವರಿದ್ದೇವೆ. ನಾವು ಈ ಬಾರಿ ಎಂಪಿ ಸ್ಥಾನದಲ್ಲಿ ಗೆದ್ದು ತೋರಿಸುತ್ತೇವೆ ಎಂದರು.
ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಯಾರೇ ಮಾಡಲಿ ಅದನ್ನು ನಿಲ್ಲಿಸಿ. ನಾವೆಲ್ಲ ಕೃಷ್ಣಾ ನದಿ ನೀರು ಕುಡಿದುಕೊಂಡೇ ಬೆಳೆದಿದ್ದೇವೆ. ಪಕ್ಷಕ್ಕೆ ದ್ರೋಹ ಮಾಡಿ ಹೀರೋ ಆಗುತ್ತೇನೆಂದರೆ ನಡೆಯಲ್ಲ. ಪಕ್ಷ ಎಲ್ಲವೂ ಗಮನಿಸುತ್ತಿದೆ ಎಂದರು.
ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ರಮೇಶ ಜಿಗಜಿಣಗಿ ಅವರನ್ನು ಸೋಲಿಸಲೆಂದೇ ಹೀಗೆಲ್ಲ ಮಾಡುತ್ತಿದ್ದಾರೆ. ಪಕ್ಷ ಎಲ್ಲವೂ ಗಮನಿಸುತ್ತಿದೆ ಎಂದು ಯತ್ನಾಳ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ಡುಮುಕಿ ಹೊಡೆದಿದ್ದಾರೆಂದು ನಮ್ಮ ಬಗ್ಗೆ ಲೇವಡಿ ಮಾಡುವವರು ಸೋಲಿಲ್ಲದ ಸರದಾರನಾ? ಡುಮುಕಿ ಹೊಡೆದಿಲ್ಲವಾ? ಈ ಹಿಂದೆ ಬಿ.ಎಲ್. ಪಾಟೀಲ ಎಂಬ ಕುದರಿಸಾಲೋಡಗಿ ಮನುಷ್ಯ ಲೋಕಸಭೆ ಚುನಾವಣೆಯಲ್ಲಿ ಸೋತಾಗ ಪೇಡೆ ಹಂಚಿದ್ದು ಯಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪರಾಜಿತ ಅಭ್ಯರ್ಥಿಗಳಾದ ವಿಜುಗೌಡ ಪಾಟೀಲ, ಸಂಜು ಐಹೊಳ್ಳಿ, ಮುಖಂಡರಾದ ಸುರೇಶ ಬಿರಾದಾರ ಮತ್ತಿತರರು ಇದ್ದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಕೊಂಡಾಡಿದ ಮಾಜಿ ಸಿಎಂ ಬೊಮ್ಮಾಯಿ, ಯತ್ನಾಳ ಒಬ್ಬ ದೂರದೃಷ್ಟಿ ನಾಯಕ. ಕ್ರಿಯಾಶೀಲ ವ್ಯಕ್ತಿ. ಅಪಾರ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಯಾರು ಮಾಡಿದ್ದಾರೋ ಅವರನ್ನು ಮುಕ್ತವಾಗಿ ಹೊಗಳಬೇಕೆಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ಕೆಲವು ಘಟನೆಗಳಾಗಿವೆ. ಅವೆಲ್ಲ ಇರುವಂಥದ್ದೇ…. ಇದು ನಿಮ್ಮ ಅಭಿಮಾನ ತೋರಿಸುತ್ತದೆ. ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಆದರೆ, ವಿವೇಕಾನಂದರು ಹೇಳಿದ ಹಾಗೆ ಗೆದ್ದಾಗ ದೊಡ್ಡ ಮನಸ್ಸು ಇರಬೇಕು. ಸೋತಾಗ ಗಟ್ಟಿ ಮನಸ್ಸು ಇರಬೇಕು. ಮತ್ತೊಮ್ಮೆ ಬರುತ್ತೇನೆ. ಎಲ್ಲರನ್ನು ಸೇರಿಸಿ ಬೃಹತ್ ಸಮಾವೇಶ ಮಾಡುವುದಾಗಿ ತಿಳಿಸಿದರು.