ವೈದ್ಯ ವೃತ್ತಿ ದೇವರ ಸೇವೆ ಎಂದೇ ಪ್ರತೀತ

The medical profession is considered a service to God.
ತೇರದಾಳ ಪಟ್ಟಣದ ದಾನಿಗೊಂಡ ನರ್ಸಿಂಗ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡ ಪ್ರಥಮ ಬ್ಯಾಚ್ ನ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳ ಪದವಿ ಸಮಾರಂಭದ ಅಂಗವಾಗಿ ಮೆರವಣಿಗೆ ಜರುಗಿತು. ಡಾ.ಸಂತೋಷ ಇಂಡಿ, ಡಾ. ಪಿ.ಬಿ. ಅಪರಾಜ ಮತ್ತಿತರರಿದ್ದಾರೆ.
Published on

ತೇರದಾಳ: ವೃತ್ತಿ ಬದ್ಧತೆ ಮತ್ತು ಗೌರವಗಳ ಮೂಲಕ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಉನ್ನತ ಗುರಿ ತಲುಪಲು ಸಾಧ್ಯ ಎಂದು ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ, ವಿಜಯಪುರದ ಬಿಎಲ್‌ಡಿಇಎ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ ಇಂಡಿ ಹೇಳಿದರು.

ಪಟ್ಟಣದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ದಾನಿಗೊಂಡ ನರ್ಸಿಂಗ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಥಮ ಬ್ಯಾಚ್‌ನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವೈದ್ಯ ವೃತ್ತಿ ಎಂಬುದು ದೇವರ ಸೇವೆಯಂದೇ ಪ್ರತೀತವಾಗಿದೆ. ಹಾಗಾಗಿ ರೋಗಿಗಳಿಗೆ ದೇವರ ರೂಪದಲ್ಲಿ ಏಕಾಗ್ರತೆ ಮೂಲಕ ಚಿಕಿತ್ಸೆ ನೀಡಬೇಕು ಎಂದರು.

ಡಾ. ಮಧುರಾ ಪಿ. ದಾನಿಗೊಂಡ ಮಾತನಾಡಿ, ವಿದ್ಯಾರ್ಥಿಗಳು ಕರ್ತವ್ಯದ ಜತೆಗೆ ಪೋಷಕರ ಕಡೆಗೆ ಗಮನಹರಿಸಬೇಕು. ಅದರೊಂದಿಗೆ ಉನ್ನತ ಶಿಕ್ಷಣವನ್ನೂ ಮುಂದುವರಿಸಿ, ನಿಶ್ಚಿತ ಗುರಿ ತಲುಪುವಂತೆ ಸಲಹೆ ನೀಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ಎಂ. ದಾನಿಗೊಂಡ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ. ಪಿ.ಬಿ. ಅಪರಾಜ್ ಅಧ್ಯಕ್ಷತೆ ವಹಿಸಿದ್ದರು.

ಸಂಜೆ ಜರುಗಿದ ದೀಪದಾನ ಮತ್ತು ಪ್ರಮಾಣವಚನ ಸ್ವಿಕಾರ ಸಮಾರಂಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಡಾ.ಮಹಾವೀರ ದಾನಿಗೊಂಡ ಮಾತನಾಡಿ, ನರ್ಸಿಂಗ್ ಕ್ಷೇತ್ರವು ಇಂದಿನ ದಿನಗಳಲ್ಲಿ ಬಹಳಷ್ಟು ವೇಗವಾಗಿ ಬೆಳೆಯುತ್ತಿದ್ದು, ದೇಶ ವಿದೇಶಗಳಲ್ಲಿ ವಿಪುಲ ಅವಕಾಶಗಳನ್ನು ಒಳಗೊಂಡಿದೆ. ನರ್ಸಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಕಿರಿಯ ವಿದ್ಯಾರ್ಥಿಗಳು ಸತತ ಅಭ್ಯಾಸದ ಮೂಲಕ ಯಶಸ್ಸುಗಳಿಸುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net