ವಿವಿಧ ಬೇಡಿಕೆ ಈಡೇರಿಕೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹೊರಗುತ್ತಿಗೆ ನೌಕರರು ಪಟ್ಟು

24TMK_Hosptl_Protest
Published on

ತುಮಕೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಗುರುವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

ಜಿಲ್ಲಾಸ್ಪತ್ರೆ ಮುಂಭಾಗ ಸಮಾವೇಶಗೊಂಡಿದ್ದ ನೌಕರರು, ಆರೋಗ್ಯ ಕ್ಷೇತ್ರದ ಬಜೆಟ್ ಶೇಕಡವಾರು ಹೆಚ್ಚಿಸಬೇಕು, ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡುವ ಜತೆ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಹೊರಗುತ್ತಿಗೆ ನೌಕರರ ಅಭಿವೃದ್ಧಿಗೆ ಆದ್ಯತೆ ನೀಡಲು ಕ್ರಮವಹಿಸಬೇಕು, ಗುತ್ತಿಗೆ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಿ, ಕಾಯಂಗೊಳಿಸಬೇಕು. ಎಲ್ಲ ಹುದ್ದೆಗಳಿಗೆ ವೇತನ ಭತ್ಯೆಗಳು ಮತ್ತು ವೇತನ ಶ್ರೇಣಿ ನೀಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಹರಿಯಾಣ ಮಾದರಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಜಾರಿ ಮಾಡಿರುವ ಏಕರೂಪ ವೇತನ ಮಾದರಿಯನ್ನು ರಾಜ್ಯದ ಎಲ್ಲ ನೌಕರರಿಗೂ ಜಾರಿಮಾಡಲು ಕ್ರಮ ವಹಿಸಬೇಕು, ಎನ್‌ಎಚ್‌ಎಂ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಬೋನಸ್ ಹೆಚ್ಚಳ ಕಾರ್ಯಗತಗೊಳಿಸಬೇಕು, ಆರೋಗ್ಯ ಭಾಗ್ಯ ಯೋಜನೆಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು. ಸಂಘದ ಅಧಿಕೃತ ಮುಷ್ಕರದ ದಿನಗಳಲ್ಲಿ ಕಡಿತವಾದ ವೇತನ ಪಾವತಿಗೆ ಮನವಿ ಮಾಡಿದರು. ಮುಷ್ಕರದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಚೇತನ್ ಇತರರು ಇದ್ದರು.

ಗುತ್ತಿಗೆ, ಹೊರಗುತ್ತಿಗೆ ತಾರತಮ್ಯ ಸಲ್ಲ: ಸರ್ಕಾರಿ ನೇಮಕಾತಿಯಲ್ಲಿ ವಯಸ್ಸಿನ ಮಿತಿ ವಿಸ್ತರಿಸುವುದು, ಸೇವಾ ಅನುಭವಕ್ಕೆ ತಕ್ಕಂತೆ ಕೆಲಸ ನೀಡುವುದು, ಪರಸ್ಪರ ವರ್ಗಾವಣೆ ಹಾಗೂ ಖಾಲಿ ಇರುವ ಜಾಗದಲ್ಲಿ ಸಾಮಾನ್ಯ ವರ್ಗಾವಣೆ ಅವಕಾಶ ನೀಡುವುದು, ಕಾಯಂ ನೇಮಕಾತಿ ಕಾರಣಕ್ಕೆ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಸಂಘದ ಮಾಧ್ಯಮ ಕಾರ್ಯದರ್ಶಿ ಎಸ್.ವಿ.ಹುಚ್ಚೇಗೌಡ ಒತ್ತಾಯಿಸಿದರು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕು, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರಿಗೂ ಕರೊನಾ ತಗುಲಿ ಮೃತಪಟ್ಟಿದ್ದು, ಸರ್ಕಾರದಿಂದ ಇಲ್ಲಿಯವರೆಗೂ ಮೃತಪಟ್ಟ ವೈದ್ಯರು ಅಥವಾ ಅವರ ಕುಟುಂಬಕ್ಕೆ ಯಾವುದೇ ಪರಿಹಾರ ಹಣ ದೊರೆತಿಲ್ಲ, ಗುತ್ತಿಗೆ ಹೊರಗುತ್ತಿಗೆ ಎಂಬ ರೀತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net