ಅವ್ಯವಸ್ಥೆ ಕಂಡು ಮೇಯರ್ ಅಸಮಾಧಾನ

22
Published on

ಮೈಸೂರು: ಮೇಯರ್ ಶಿವಕುಮಾರ್ ಮಂಗಳವಾರ ಬೆಳಗ್ಗೆ ನಗರ ಪ್ರದಕ್ಷಿಣೆ ಮಾಡಿದರಲ್ಲದೆ, ಅವ್ಯವಸ್ಥೆಗಳನ್ನು ಕಣ್ಣಾರೆ ನೋಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.


ನಗರದ ಫೈವ್‌ಲೈಟ್ ಸರ್ಕಲ್ ವೃತ್ತದಿಂದ ಪ್ರದಕ್ಷಿಣೆ ಆರಂಭಿಸಿದ ಮೇಯರ್, ವೃತ್ತದಲ್ಲಿ ಮ್ಯಾನ್‌ಹೋಲ್ ಒಡೆದು ರಸ್ತೆಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡರು. ಸಾರ್ವಜನಿಕರು ಈ ರಸ್ತೆಯಲ್ಲಿ ಗಲೀಜು ನೀರು ದಾಟಿ ಹೋಗಬೇಕಾಗಿದೆ ಎನ್ನುವ ದೂರಿಗೆ ಸ್ಪಂದಿಸಿದರಲ್ಲದೆ, ತಕ್ಷಣವೇ ದುರಸ್ತಿಪಡಿಸಿ ಲೀಕ್ ಆಗುವುದನ್ನು ತಪ್ಪಿಸಬೇಕು ಎಂದು ಸೂಚಿಸಿದರು.


ಬಿಷಪ್ ಹೌಸ್ ಮಾರ್ಗದ ವೃತ್ತದಲ್ಲಿರುವ ಖಾಸಗಿ ಕಟ್ಟಡದ ಮಾಲೀಕರು ರಸ್ತೆಯಲ್ಲೇ ಕಾಂಪೌಂಡ್ ನಿರ್ಮಾಣ ಮಾಡಿರುವುದರಿಂದ ಜೋಡಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಮೇಯರ್ ಗಮನಕ್ಕೆ ತಂದರು. ಇರ್ವಿನ್ ರಸ್ತೆಯಲ್ಲಿ ಮಾಲೀಕರಿಗೆ ನೀಡಿರುವ ಪರಿಹಾರದ ಮೊತ್ತವನ್ನೇ ನಮಗೂ ಕೊಡುವಂತೆ ಕೇಳಿದ್ದು, ಈ ವಿಚಾರದಲ್ಲಿ ಹಲವಾರು ಬಾರಿ ಮಾತುಕತೆ ನಡೆಸಲಾಗಿದೆ. ಹೀಗಿದ್ದರೂ, ಜಾಗಬಿಡಲು ಒಪ್ಪಿಲ್ಲವೆಂದು ಹೇಳಿದಾಗ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು, ಕಾನೂನು ತಜ್ಞರ ಸಲಹೆ ಪಡೆದು ಸಮಸ್ಯೆ ಇತ್ಯರ್ಥಪಡಿಸಿ ಉಳಿದ ಕಾಮಗಾರಿ ಮುಗಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.


ಇದೇ ರಸ್ತೆಯಲ್ಲಿ ಯುಜಿಡಿ ಕಾಮಗಾರಿಗೆ ರಸ್ತೆಯನ್ನು 50 ಮೀಟರ್‌ನಷ್ಟು ಅಗೆದಿದ್ದು, ಈ ವೇಳೆ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿರುವುದನ್ನು ಗಮನಿಸಿದ್ದು, ದಸರಾ ತನಕ ಆರಂಭಿಸಿರುವ ಕಾಮಗಾರಿ ಪೂರ್ಣಗೊಳಿಸಿ ಉಳಿದನ್ನು ನಂತರ ಕೈಗೆತ್ತಿಕೊಳ್ಳಬೇಕು. ಪೈಪ್ ಅಳವಡಿಸಿದ ಮೇಲೆ ಚೆನ್ನಾಗಿ ಮಣ್ಣು, ಜಲ್ಲಿಯಿಂದ ಮುಚ್ಚಬೇಕು. ಅದೇ ಮಣ್ಣನ್ನು ಹಾಕಿ ತುಂಬಿದರೆ ಒತ್ತಡ ತಾಳದೆ ಹೂತುಬಿಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net