

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹಳೇ ಬಸ್ ನಿಲ್ದಾಣ ಪಕ್ಕದ ಪಾಲಿಕೆ ಅಧೀನದ ಹೆರಿಗೆ ಆಸ್ಪತ್ರೆಗೆ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಶುಕ್ರವಾರ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿನ ಚಿಕಿತ್ಸಾ ಕೊಠಡಿ, ಸಾಮಾನ್ಯ ವಾರ್ಡ್ಗಳು ಸೇರಿ ಇಡೀ ಆಸ್ಪತ್ರೆ ವೀಕ್ಷಿಸಿದ ಮೇಯರ್, ರೋಗಿಗಳ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಆಸ್ಪತ್ರೆಯಲ್ಲಿನ ಕುಂದು-ಕೊರತೆಗಳ ಮಾಹಿತಿ ಸಹ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ಆಸ್ಪತ್ರೆ ಶಿಥಿಲವಾಗಿದ್ದು, ಕಟ್ಟಡ ನೆಲಸಮಗೊಳಿಸಲು ಆ. 1ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಅರವಿಂದ ಬೆಲ್ಲದ ಜತೆಗೆ ಚರ್ಚಿಸಿ ಜನತೆಯ ಆರೋಗ್ಯ ದೃಷ್ಟಿಯಿಂದ ಸಿಎಸ್ಆರ್ ನಿಧಿ ಅಡಿ 300 ಹಾಸಿಗೆಯ ನೂತನ ಆಸ್ಪತ್ರೆ ನಿಮಿರ್ಸುವ ಉದ್ದೇಶ ಹೊಂದಿದ್ದೇವೆ ಎಂದರು.
ಉಪ ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸುರೇಶ ಬೇದರೆ, ಹೆರಿಗೆ ಆಸ್ಪತ್ರೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ಇತರರು ಇದ್ದರು.