ಮೇಯರ್​ಗೆ ಹೆಚ್ಚಿನ ಅಧಿಕಾರ ನೀಡಬೇಕು

mayor sambram
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮೇಯರ್ ಅಧಿಕಾರವಧಿ ಹೆಚ್ಚಿಸಲು ಸಾಧ್ಯವಾಗದಿದ್ದರೆ, ಈಗಿರುವ ಒಂದು ವರ್ಷದ ಅವಧಿಯಲ್ಲಿ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಅಭಿಪ್ರಾಯಿಸಿದರು.

ಮೇಯರ್ ಆಗಿ ಒಂದು ವರ್ಷದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಾರ್ಥಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಎರಡು ಕಡೆ ಮಾತ್ರ ಮೇಯರ್ ಅಧಿಕಾರವಧಿ 5 ವರ್ಷಗಳದ್ದಾಗಿದೆ. ಒಂದು ವರ್ಷದ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. 5 ವರ್ಷಗಳು ಇರಬೇಕೆಂದು ನಾವು ಕೇಳುವುದಿಲ್ಲ. ಎಲ್ಲರಿಗೂ ಪ್ರಾತಿನಿಧ್ಯ ಸಿಗಬೇಕು ಎಂಬುದು ನಮ್ಮ ನಿಲುವು ಸಹ ಆಗಿದೆ. ಮೇಯರ್ ಅಧಿಕಾರ ಅವಧಿಯನ್ನು ಕನಿಷ್ಟ 2.5 ವರ್ಷಕ್ಕೆ ವಿಸ್ತರಿಸಬೇಕು ಅಥವಾ ಒಂದೇ ವರ್ಷಕ್ಕೆ ಸೀಮಿತಗೊಳಿಸಿದರೂ ಮೇಯರ್​ಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಹೇಳಿದರು.

ಎಸ್.ಆರ್. ಬೊಮ್ಮಾಯಿ ಕಾರಣ

ಕಿಲೋಸ್ಕರ್ ಕಂಪನಿಯಲ್ಲಿ ಸಾಮಾನ್ಯ ನೌಕರನಾಗಿದ್ದ ನಾನು ಮೇಯರ್ ಆಗುತ್ತೇನೆ ಎಂದುಕೊಂಡಿರಲಿಲ್ಲ. ನನ್ನನ್ನು ರಾಜಕೀಯಕ್ಕೆ ತಂದವರೇ ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್. ಬೊಮ್ಮಾಯಿ ಅವರು. 2001ರಲ್ಲಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್​ನಿಂದ ಟಿಕೆಟ್ ನೀಡಿದಲ್ಲದೇ ಚುನಾವಣೆ ಖರ್ಚಿಗೆ 2 ಲಕ್ಷ ರೂ. ಹಣ ನೀಡಿದ್ದರು. ಬಳಿಕ ಮೇಯರ್, ಸಭಾನಾಯಕ, ವಿಪಕ್ಷ ನಾಯಕ, ಸ್ಥಾಯಿ ಸಮಿತಿಗಳ ಚೇರಮನ್ ಎಲ್ಲ ಜವಾಬ್ದಾರಿಯನ್ನು ನಿಭಾಯಿಸಿರುವ ಹೆಮ್ಮೆ ಇದೆ ಎಂದರು.

ಸಭಾ ನಾಯಕ ವೀರಣ್ಣ ಸವಡಿ ಮಾತನಾಡಿ, ಇಲ್ಲಿಯವರೆಗೆ ನಾನು 18 ಮೇಯರ್​ಗಳ ಜತೆ ಕೆಲಸ ಮಾಡಿದ್ದೇನೆ. ಮೇಯರ್ ರಾಮಪ್ಪ ಬಡಿಗೇರ ಇ-ಸ್ವತ್ತು ಮೇಳ, ಫೋನ್ ಇನ್ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

ವಿಪಕ್ಷ ನಾಯಕ ರಾಜಶೇಖರ ಕಮತಿ ಮಾತನಾಡಿ, ಮೊದಲ ಬಾರಿಗೆ ಪಾಲಿಕೆಯ ಸದಸ್ಯನಾಗಿ ಆಯ್ಕೆಯಾದ ನಾನು ಮೇಯರ್ ರಾಮಪ್ಪ ಅವರಿಂದ ಬಹಳಷ್ಟು ಕಲಿತಿದ್ದೇನೆ. ರಾಜಕೀಯ ಏನೇ ಇದ್ದರೂ ಅಭಿವೃದ್ಧಿ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.

ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಮೇಯರ್ ರಾಮಪ್ಪ ಅವರು ಸರಳ ಸ್ವಭಾವದ ವ್ಯಕ್ತಿ. ಈ ಬಾರಿ 15ನೇ ಹಣಕಾಸು ಯೋಜನೆಯ ಅನುದಾನದಡಿ ಕಾಮಗಾರಿಗಳಿಗೆ ಜೂನ್ ತಿಂಗಳಲ್ಲಿಯೇ ಟೆಂಡರ್ ಕರೆಯಲು ಸಾಧ್ಯವಾಗಿದ್ದು ಮೇಯರ್ ಅವರ ಮುತುವರ್ಜಿಯಿಂದ. ನಾನು ಆಯುಕ್ತನಾಗಿ ಆಗಮಿಸಿದ ಆರಂಭಿಕ ದಿನಗಳಲ್ಲಿ ಸಭೆ ನಡೆದಾಗ ನನ್ನನ್ನು ತಿದ್ದಿ ತೀಡಿದ್ದಾರೆ ಎಂದು ಶ್ಲಾಘಿಸಿದರು.

ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಮೇಯರ್ ರಾಮಪ್ಪ ಬಡಿಗೇರ ಹಾಗೂ ಉಪ ಮೇಯರ್ ದುರ್ಗಮ್ಮ ಬಿಜವಾಡ ಅವರನ್ನು ಸನ್ಮಾನಿಸಿದರು. ಪಾಲಿಕೆಯ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಶಿವು ಹಿರೇಮಠ, ಇಮ್ರಾನ್ ಎಲಿಗಾರ, ಹೆಚ್ಚುವರಿ ಆಯುಕ್ತ ಆರ್. ವಿಜಯಕುಮಾರ, ಇತರರು ಇದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಆಗಮಿಸಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net