ಇನ್ನೂ ಪಸರಿಸುತ್ತಿದೆ ಮಾವಾ ಘಾಟು

The Mawa Ghat is still spreading.
ಜಮಖಂಡಿಯಲ್ಲಿ ಮಾರಾಟ ಮಾಡಿರುವ ಮಾವಾ ಪಾಕೇಟ್.
Published on

ಜಮಖಂಡಿ: ನಗರ ಹಾಗೂ ತಾಲೂಕಿನ ಗ್ರಾಮಿಣ ಪ್ರದೇಶಗಳಲ್ಲಿ ಮಾವಾ ಕದ್ದು ಮುಚ್ಚಿ ಮಾರಾಟ ನಡೆಯುತ್ತಿದೆ.

ವಿಜಯವಾಣಿ ಪತ್ರಿಕೆ ಜು.21 ರಂದು ‘ಜಮಖಂಡಿಯಲ್ಲಿ ಎಗ್ಗಿಲ್ಲದೆ ಸಾಗಿದ ಮಾವಾ ದಂಧೆ’ ಎಂಬ ತಲೆ ಬರಹದಡಿ ಪ್ರಕಟಿಸಿದ ವರದಿಗೆ ಎಚ್ಚೆತ್ತುಕೊಂಡ ಜಿಲ್ಲೆ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ದಾಳಿ ನಡೆಸಿ ಎರಡು ಯಂತ್ರ ಮತ್ತು ಮಾವಾ ಕಚ್ಚಾ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡು 25ಕ್ಕೂ ಅಧಿಕ ದೂರು ದಾಖಲಿಸಿದ್ದರು.

ಆದರೂ ನಗರದಲ್ಲಿ ಮಾವಾ ಮಾರಾಟ ಜಾಲ ಮಾತ್ರ ಯಥಾವತ್ತಾಗಿ ನಡೆಯುತ್ತಿರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.

ಗ್ರಾಹಕರಿದ್ದಲ್ಲಿಗೆ ಹೋಗಿ ಮಾರಾಟ: ನಗರದಲ್ಲಿನ ಅಂಗಡಿ ಮುಂಗಟ್ಟುಗಳ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂದು ಮಾವಾ ಮಾರಾಟಗಾರರು ಗ್ರಾಹಕರು ಇದ್ದಲ್ಲಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ.

ದುಬಾರಿ ಬೆಲೆ: ನಗರದ ಹೊರಲಯದ ತೋಟ, ಪಕ್ಕದ ಶಿರೋಳ, ಮಹಾಲಿಂಗಪುರ, ಬನಹಟ್ಟಿಯಿಂದ ಮಾವಾ ತರಿಸಿಕೊಂಡು ಇಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮಾವಾ ಗ್ರಾಹಕರು ತಿಳಿಸಿದ್ದಾರೆ.

ತಿನ್ನುವುದು ಬಿಡಬೇಕೆಂದರು ಬಿಡಕ್ಕಾಗ್ತಾ ಇಲ್ಲ: ಮಾವಾದಿಂದ ಆರೋಗ್ಯಕ್ಕೆ ಹಾನಿಕರ ಅಂಥ ಗೊತ್ತು. ಆದರೆ ನಮಗೆ ಮಾವಾ ಇಲ್ಲದೆ ನಡೆಯೋದೆ ಇಲ್ಲ ಅಂಥ ಇದ್ವಿ. ಮಾವಾ ಬಂದ ಆದಮೇಲೆ ಗುಣಮಟ್ಟವಲ್ಲದ ಮಾವಾ ತಂದುಕೊಡುತ್ತಿದ್ದಾರೆ. ಆದರೆ ಅದು ನಮಗೆ ಇಷ್ಟ ಆಗುತ್ತಿಲ್ಲ. ಅನಿವಾರ್ಯವಾಗಿ ಗುಟ್ಕಾ ತಿನ್ನುತ್ತಿದ್ದೇವೆ ಎಂದು ಮಾವಾ ವ್ಯಸನಿಗಳು ಹೇಳುತ್ತಿದ್ದಾರೆ.

ಪೊಲೀಸರಿಗೆ ಚಳ್ಳೆ ಹಣ್ಣು?: ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸರು, ಅಧಿಕಾರಿಗಳು ಮಾವಾ ಮಾರಾಟ ತಡೆಯಲು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡರೂ ಮಾವಾ ತಯಾರಕರು, ಮಾರಾಟಗಾರರು ಮಾತ್ರ ಪೊಲೀಸ್ ಮತ್ತು ಅಧಿಕಾರಿಗಳ ಕಣ್ತಪ್ಪಿಸಿ ಗ್ರಾಹಕರಿಗೆ ಮಾವಾ ತಲುಪಿಸುತ್ತಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.

ತಯಾರಕೆನ್ನೇ ಬಂಧಿಸಿ: ಮಾವಾ ತಯಾರಿಸುವವರನ್ನು ಮತ್ತು ಮಾರಾಟ ಮಾಡುವವರನ್ನು ಗುರುತಿಸುವ ಕೆಲಸ ಪೊಲೀಸರಿಗೆ ಕಠಿಣ ವಿಷಯವಲ್ಲ. ಮಾವಾ ತಯಾರಿಕೆಯ ಅಡ್ಡಗಳ ಮಟ್ಟ ಹಾಕಬೇಕು. ಆ ನಿಟ್ಟಿನಲ್ಲಿ ತಯಾರಕರನ್ನು, ಮಾರಾಟಗಾರರನ್ನು ಬಂಧಿಸುವ ಕೆಲಸ ಆಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಮಾವಾ ವ್ಯಸನಿಗಳಿಗೆ ಅವರು ಇದ್ದಲ್ಲಿಗೆ ಹೋಗಿ ಮುಟ್ಟಿಸುತ್ತಿರುವುದರ ಬಗ್ಗೆ ಗಮನ ಹರಿಸಲಾಗುವುದು. ಮಫ್ತಿನಲ್ಲಿ ಸಿಬ್ಬಂದಿ ನಿಯೋಜಿಸಿ ಕ್ರಮ ಜರುಗಿಸಲಾಗುವುದು. ಎಸ್. ರೋಷನ್ ಜಮೀರ್, ಡಿವೈಎಸ್‌ಪಿ, ಜಮಖಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net