ಪಡಿತರಕ್ಕಾಗಿ ಜನಸಾಮಾನ್ಯರ ಪರದಾಟ!

The masses of the masses for rations!
ಸರ್ವರ್ ಸಮಸ್ಯೆಯಿಂದಾಗಿ ಗೊಳಸಂಗಿಯಲ್ಲಿ ಪಡಿತರ ಚೀಟಿ ಪಡೆಯಲು ಹರಸಾಹಸ ಪಡುತ್ತಿರುವ ಗ್ರಾಮಸ್ಥರು.
Published on

ಗೊಳಸಂಗಿ: ನ್ಯಾಯ ಬೆಲೆ ಅಂಗಡಿಗಳ ಮೂಲಕ ರಾಜ್ಯದ ಜನತೆ ಪಡೆಯುತ್ತಿರುವ ಪಡಿತರ ಧಾನ್ಯ ಪೂರೈಕೆ ಸುಲಲಿತವಾಗಲೇಂದು ನಿರೀಕ್ಷೆಯನ್ನಿಟ್ಟು ಆಹಾರ ಇಲಾಖೆ ಹೊಸದಾಗಿ ಅಳವಡಿಸಿರುವ ತಂತ್ರಾಂಶದಿಂದಲೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮೂಲಕ ಗೊಳಸಂಗಿ, ದುರ್ಗಾದೇವಿ ನಗರ ಮತ್ತು ಬುದ್ನಿ ಗ್ರಾಮ ಸೇರಿ 718 ಎಪಿಎಲ್ ಕಾರ್ಡುದಾರರನ್ನು ಹೊರತುಪಡಿಸಿ 170 ಅಂತ್ಯೋದಯ, 1518 ಪಿಬಿಎಲ್ ಕಾರ್ಡುದಾರರು ಪ್ರತಿ ತಿಂಗಳು ಪಡಿತರ ಧಾನ್ಯ ಪಡೆಯುತ್ತಿದ್ದಾರೆ.

ತಿಂಗಳಿಗೊಮ್ಮೆ ಇಲ್ಲಿ ಪಡಿತರ ಧಾನ್ಯಕ್ಕಾಗಿ ಚೀಟಿ ಪಡೆಯಲು ಹರಸಾಹಸ ಪಡಬೇಕಾಗಿದೆ. ಪಡಿತರ ಚೀಟಿ ಮಾಡಲು ಅಗತ್ಯವಿರುವ ಸರ್ವರ್ ಯಾವಾಗ ಇರುವುದೋ, ಮತ್ಯಾವಾಗ ಮಾಯವಾಗುವುದೋ ಎಂಬುದು ತಿಳಿಯದೆ ಜನತೆ ನ್ಯಾಯ ಬೆಲೆ ಅಂಗಡಿಗೆ ಅಲೆದಾಡಿ ಸುಸ್ತಾಗುತ್ತಿದ್ದಾರೆ.

ಪಡಿತರರಿಗೆ ಇದು ನುಂಗಲಾಗದ ಬಿಸಿತುಪ್ಪವಾಗಿ ಪರಿಣಮಿಸಿದೆ. ಒಂದು ದಿನದ ದುಡಿಮೆ ಬಿಟ್ಟಾದರೂ ಸರಿ ಪಡಿತರ ತೆಗೆದುಕೊಂಡು ಹೋಗಲೇಬೇಕು ಎಂದುಕೊಂಡರೂ ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆ ಬಗೆಹರಿಯದಿರುವು ವಿಪರ್ಯಾಸ.

ಪಡಿತರಕ್ಕಾಗಿ ಕೆಲಸ ಬಿಟ್ಟು ಸರತಿ ಕುಳಿತರೂ ನಮಗೆ ಚೀಟಿ ದೊರೆಯುತ್ತಿಲ್ಲ. ಹೊಟ್ಟೆ ಪಾಡಿಗಾಗಿ ಕೂಲಿ ಕೆಲಸವನ್ನೇ ಅವಲಂಬಿಸಿರುವವರಿಗೆ ಇದು ಬಲು ದುಬಾರಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗೆ ತುರ್ತು ಪರಿಹಾರ ನೀಡಬೇಕು. ಚಂದ್ರಕಲಾ ಚಂದ್ರಶೇಖರ ಕಲಾದಗಿ, ಸರ್ವರ್ ಸಮಸ್ಯೆಯಿಂದ ನೊಂದ ಮಹಿಳೆ, ಗೊಳಸಂಗಿ ಸರ್ವರ್ ಸಮಸ್ಯೆ ಎಂಬುದು ರಾಜ್ಯವ್ಯಾಪಿ ಆಗಿರುವಂತದ್ದು. ಹೊಸ ತಂತ್ರಾಂಶವನ್ನು ರಾಜ್ಯಕ್ಕೆ ಡಂಪ್ ಮಾಡಲಾಗುತ್ತಿದೆ. ಅಲ್ಲಿಯವರೆಗೂ ಈ ಸಮಸ್ಯೆ ಸಹಜ. ಆದ್ದರಿಂದ ಎಲ್ಲ ನ್ಯಾಯ ಬೆಲೆ ಅಂಗಡಿಯವರಿಗೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ಚೀಟಿ ಮತ್ತು ಆಹಾರ ಧಾನ್ಯ ಪೂರೈಸಲು ಸೂಚಿಸಲಾಗಿದೆ. ಅಮರೇಶ ವಿ. ತಾಂಡೂರ, ವ್ಯವಸ್ಥಾಪಕರು, ಆಹಾರ ಇಲಾಖೆ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net