

ಶೃಂಗೇರಿ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಡಿದ ತಪ್ಪಿನಿಂದ ರೈತರ ಹಾಗೂ ಜನಸಾಮಾನ್ಯರ ಬದುಕು ಅತಂತ್ರವಾಗಿದೆ ಎಂದು ಗ್ರಾಪಂ ಸದಸ್ಯ ತ್ರಿಮೂರ್ತಿ ಆರೋಪಿಸಿದರು.
ಮೆಣಸೆ ಗ್ರಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ಅನುಪ್ ಸಂಜೋಗ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, 2008-09ರಲ್ಲಿ ಜನಪ್ರತಿನಿಧಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲ ಭೂಮಿಯನ್ನು ಕೂಲಂಕಷವಾಗಿ ಪರಿಶೀಲನೆ ಮಾಡದೇ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರಿಂದ ಆರಂಭವಾದ ಸಮಸ್ಯೆಗೆ ಇಂದಿಗೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ದೂರಿದರು.
ತಹಸೀಲ್ದಾರ್ ಅನುಪ್ ಸಂಜೋಗ್ ಮಾತನಾಡಿ, ಸರ್ಕಾರ ಮಾಡುವ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಕಾನುನುಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ರೈತರು ನೀಡಿದ ಅರ್ಜಿ ನಮೂನೆ 52ರಿಂದ 57ರ ಕಡತಗಳನ್ನು ಹಾಗೂ 94ಸಿ ಅರ್ಜಿಗಳ ಪರಿಶೀಲನೆ ನೀಡಲಾಗಿದೆ ಎಂದರು.
ಗ್ರಾಪಂ ಸದಸ್ಯ ಅಜಿತ್‌ಶೆಟ್ಟಿ ಮಾತನಾಡಿ, ಮೆಣಸೆ ಗ್ರಾಪಂ ವ್ಯಾಪ್ತಿಯ ಕಲ್ಕಟ್ಟೆ ಸರ್ವೇ ನಂಬರ್151 ಮತ್ತು 181ರಲ್ಲಿ ಹಿಂದೆ ಆಶ್ರಯ ನಿವೇಶನಕ್ಕೆ ಜಾಗ ಗುರುತಿಸಿದ್ದು ಆ ಜಾಗದಲ್ಲಿ ಇನ್ನೂ ಲೇಔಟ್ ನಿರ್ಮಾಣವಾಗಿಲ್ಲ. ಆಶ್ರಯ ನಿವೇಶನ ಸಿಗದೇ ಜನರು 20 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ನಿರ್ಮಿಸಲು ಅರಣ್ಯ ಇಲಾಖೆ ಕಾನೂನಿನ ತೊಡಕಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ಬಡವರಿಗೆ ನಿವೇಶನ ಎಂಬುದು ಗಗನ ಕುಸುಮವಾಗಿದೆ ಎಂದರು.
ಅರಣ್ಯ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ ಮಾತನಾಡಿ, ಈ ಜಾಗ ಸೊಪ್ಪಿನ ಬೆಟ್ಟವಾಗಿದ್ದು ಕಾನೂನಿನ ತೊಡಕಿದೆ. ಹಾಗಾಗಿ ಇಲಾಖೆಯಿಂದ ಕಡೂರಿನ ಎಫ್‌ಎಸ್‌ಒ ಅಧಿಕಾರಿಗಳಿಗೆ ಇದರ ಕುರಿತು ಮನವಿ ಸಲ್ಲಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸಂಧ್ಯಾ ಪರಿಯಪ್ಪ, ಸದಸ್ಯರಾದ ರಾಜು ಶೂನ್ಯ, ಸುಷ್ಮಾ, ಮಂಜುನಾಥ್ ,ಕವಿತಾ, ಸುಮಲತಾ ಇದ್ದರು.