ಜಾಗೃತಿ ಕೊರತೆಗೆ ಸಾಕ್ಷಿಯಾದ ಮಾರುಕಟ್ಟೆ

23 vikram 1B
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ಜಿಲ್ಲೆ ಲಾಕ್ ಡೌನ್ ಆಗಿದ್ದರೂ ಜನತೆ ಮಾತ್ರ ಆದೇಶವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ನಗರದ ಮಾರುಕಟ್ಟೆ ಪ್ರದೇಶ ಸೋಮವಾರ ಜನಜಂಗುಳಿಯಿಂದ ಕೂಡಿತ್ತು.

ನಗರದ ಎಲ್ಲ ಬಡಾವಣೆಗಳಲ್ಲಿ ಅಗತ್ಯ ವಸ್ತುಗಳ ಮಳಿಗೆಗಳು ಬಿಟ್ಟರೆ ಉಳಿದ ಮಳಿಗೆಗಳು ಬಂದಾಗಿದ್ದವು. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಇತರ ಕೆಲ ಅಂಗಡಿಗಳು ಸಹ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು. ನಂತರ ಪೊಲೀಸ್ ಸಿಬ್ಬಂದಿ ಆಗಮಿಸಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದರು.

ಯುಗಾದಿ ಹಬ್ಬ ಸಮೀಪಿಸಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಬಹುತೇಕ ಜನರು ಸೋಮವಾರ ಬೆಳಗ್ಗೆಯೇ ಹೊರಬಿದ್ದ ಹಿನ್ನೆಲೆಯಲ್ಲಿ ಮಾರುಕಟ್ಟೆ ಸಣ್ಣ ಜಾತ್ರೆಯಂತಾಗಿತ್ತು. ಆದರೆ, ಈ ಪ್ರದೇಶವೂ ಕಂಟೇನ್​ವೆುಂಟ್ ವ್ಯಾಪ್ತಿಯಲ್ಲೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕೆಲವರು ಆತಂಕಗೊಳ್ಳುವಂತಾಗಿತ್ತು.

ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹೂವು, ಹಣ್ಣು ಅಂಗಡಿಗಳನ್ನು ಬಿಟ್ಟು ಉಳಿದ ವಾಣಿಜ್ಯ ಮಳಿಗೆಗಳು ಸಂಪೂರ್ಣ ಬಂದ್ ಆಗಿದ್ದವು. ಸರ್ಕಾರ ಯಾವ ಸಂದರ್ಭದಲ್ಲಾದರೂ ಯಾವುದೇ ಆದೇಶ ಹೊರಡಿಸಬಹುದು ಎಂಬ ಹಿನ್ನೆಲೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿ ಬಿದ್ದಿದ್ದರು. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಪಯ್ರತ್ನಪಟ್ಟರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಕಂದಾಯ ಇಲಾಖೆ ಅಧಿಕಾರಿಗಳೇ ಲಾಠಿ ಹಿಡಿದು ಅಂಗಡಿಗಳನ್ನು ಬಂದ್ ಮಾಡಿಸುವ ಕೆಲಸ ಮಾಡಿದರು.

ಪಾಲಿಕೆ ಹೀಗೆ ಮಾಡಲಿ: ನಗರದಲ್ಲಿ ನೆಹರು ಮಾರುಕಟ್ಟೆ, ಸೂಪರ್ ಮಾರು ಕಟ್ಟೆಗಳೇ ಪ್ರಮುಖ ವ್ಯಾಪಾರದ ಸ್ಥಳಗಳಾಗಿವೆ. ಆದರೆ, ಇಲ್ಲಿ ಕಿರಾಣಿ ಅಂಗಡಿಗಳು ಒಂದಕ್ಕೊಂದು ಹತ್ತಿರ ಇರುವುದಲ್ಲದೆ, ತರಕಾರಿ ವ್ಯಾಪಾರಿಗಳು ಸಹ ಒಂದೇ ಸಾಲಿನಲ್ಲಿ ಕೂಡ್ರುತ್ತಾರೆ. ಇದೂ ಜನಜಂಗುಳಿಗೆ ಕಾರಣವಾಗುತ್ತದೆ. ಹೀಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವವರೆಗೂ ತರಕಾರಿ ವ್ಯಾಪಾರಸ್ಥರಿಗೆ ಮಾರುಕಟ್ಟೆ ಪ್ರದೇಶದ ಸುತ್ತ ಖಾಲಿ ಇರುವ ಜಾಗಗಳಲ್ಲಿ ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸಿದರೆ ಜನಸಂದಣಿ ನಿಯಂತ್ರಣ ಮಾಡಲು ಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಮಾರುಕಟ್ಟೆಯಲ್ಲಿ ಡಿಸಿ ದೀಪಾ: ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಅರಿತ ಜಿಲ್ಲಾಧಿಕಾರಿ ದೀಪಾ ಚೋಳನ್ ಸಂಜೆ ಹೊತ್ತಿಗೆ ಸ್ವತಃ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸುಭಾಷ್ ರಸ್ತೆ, ಸೂಪರ್ ಮಾರುಕಟ್ಟೆ, ಅಕ್ಕಿಪೇಟ್, ಮೀನು ಮಾರುಕಟ್ಟೆ ಮತ್ತಿತರ ಪ್ರದೇಶಗಳಲ್ಲಿ ಸಂಚಾರ ನಡೆಸಿ ನಿಷೇಧಾಜ್ಞೆ ಕುರಿತು ಮಾಹಿತಿ ನೀಡಿದರು. ಇದಲ್ಲದೆ ವ್ಯಾಪಾರಸ್ಥರು ಹಾಗೂ ಜನರು ಅಗತ್ಯ ವಸ್ತುಗಳ ಖರೀದಿಯನ್ನು ಬೇಗನೆ ಮುಗಿಸಬೇಕು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಯಾವುದೇ ವ್ಯಾಪಾರ ನಡೆಸುವಂತಿಲ್ಲ. ಅನಗತ್ಯವಾಗಿ ಹೊರಗಡೆ ತಿರುಗಾಡುವಂತಿಲ್ಲ ಎಂದು ಪೊಲೀಸ್ ಮೈಕ್ ಮೂಲಕ ಎಚ್ಚರಿಕೆ ನೀಡಿದರು.

ಅನಗತ್ಯ ಸುತ್ತಾಟ ಬೇಡ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಸರ್ಕಾರ ನೀಡಿದ ಆದೇಶದಂತೆ ಜಿಲ್ಲಾಡಳಿತ ಈಗಾಗಲೇ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಇದರ ಯಶಸ್ಸಿಗೆ ಜನರ ಸಹಕಾರವೂ ಬೇಕು. ಹೀಗಾಗಿ ಅಗತ್ಯ ಕಾರ್ಯ ಹೊರತುಪಡಿಸಿ ವಿನಾಕಾರಣ ನಗರ ಪ್ರದಕ್ಷಿಣೆ ಹಾಕುವುದನ್ನು ತಡೆಗಟ್ಟಬೇಕಿದೆ. ಕೆಲ ಯುವಕರು ಬೈಕ್, ಕಾರಿನಲ್ಲಿ ನಗರ ಸುತ್ತಾಡುತ್ತಿದ್ದರೆ, ಕೆಲವರು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಹರಟೆ ಹೊಡೆಯುತ್ತಾರೆ. ಇಂತಹದ್ದನ್ನು ಮೊದಲು ಬಿಡಬೇಕು. ಅಂದಾಗ ಮಾತ್ರ ಈ ಆದೇಶಗಳು ಯಶಸ್ವಿಯಾಗಲು ಸಾಧ್ಯ ಎಂಬುದು ವಿಜಯವಾಣಿ ಕಳಕಳಿ ಸಹ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net