

ಕನಕಗಿರಿ: ಹಣ್ಣುಗಳ ರಾಜ ಮಾವಿನ ಸುಗ್ಗಿ ಮಾಸುತ್ತಲೇ ಆರಂಭವಾಗಿರುವ ಕಡುನೀಲಿ ಬಣ್ಣದ ನೇರಳೆಗೆ ದರ ಕುಸಿತ ಭೀತಿ ಬೆನ್ನಲ್ಲೇ ಹುಳುಗಳ ಕಾಟ ಹೆಚ್ಚಾಗಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಧುಮೇಹಿಗಳಿಗೆ ಉತ್ತಮವಾದ ಹಣ್ಣು ಎನ್ನಲಾಗುವ ನೇರಳೆಯನ್ನು ತಿನ್ನ ಬಯಸುವವರು ಹೆಚ್ಚು. ತಾಲೂಕಿನ ವಡಕಿ, ಹುಲಿಹೈದರ ಭಾಗದಲ್ಲಿ ಹೆಚ್ಚಾಗಿ ತೋಟಗಾರಿಕೆ ಬೆಳೆಗಳ ಮಧ್ಯದಲ್ಲಿ ನಾನಾ ತಳಿಯ ನೆರಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ನಾನಾ ಗಿಡಗಳಲ್ಲಿ ಕಡು ನೀಲಿ ಬಣ್ಣದ ನೇರಳೆ ಹಣ್ಣು ಬಿಡಲು ಪ್ರಾರಂಭಿಸಿದಾಗ ಕೆಜಿಗೆ ಮಂಡಿಯಲ್ಲಿ (ಸಗಟು ವ್ಯಾಪಾರ) 80ರಿಂದ 100 ರೂ. ಮಾರಾಟವಾಗಿತ್ತು. ಇದು ವರ್ಷಪೂರ್ತಿ ಲಾಭಕ್ಕಾಗಿ ಕಾದಿದ್ದ ರೈತನಿಗೆ ಖುಷಿ ನೀಡಿತ್ತು. ಗ್ರಾಹಕನಿಗೆ 150ರಿಂದ 200 ರೂ. ದರದಲ್ಲಿ ಕೈಗೆಟಕುತ್ತಿತ್ತು.
ಇದೀಗ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬರಲಾರಂಭಿಸಿದ್ದರಿಂದ ದಿಢೀರ್ ದರ ಕುಸಿಯಲಾರಂಭಿಸಿದೆ. ಇದರಿಂದ ರೈತ ಕೆಂಗಟ್ಟಿದ್ದಾನೆ.ಇದರ ಜತೆಗೆ ಗಿಡದಲ್ಲಿನ ಹಣ್ಣುಗಳಿಗೆ ಹುಳು ಬೀಳಲು ಆರಂಭಿಸಿದ್ದರಿಂದ ರೈತ ಇಕ್ಕಟ್ಟಿಗೆ ಸಿಲುಕಿದ್ದು, ಹಣ್ಣುಗಳನ್ನು ಗಿಡದಿಂದ ಬಿಡಿಸಿದರೂ ಕಷ್ಟ ಹಾಗೇ ಬಿಟ್ಟರೂ ಕಷ್ಟ ಎನ್ನುವ ಪರಿಸ್ಥಿತಿಗೆ ಬಂದು ನಿಂತಿದ್ದಾನೆ. ಹಣ್ಣು ಬಿಡಿಸುವ ಖರ್ಚು, ಸಾರಿಗೆ ಹಾಗೂ ನಿರ್ವಹಣೆ ವೆಚ್ಚ ಗಮನಿಸಿದರೆ ಯಾವ ಲಾಭವೂ ಇಲ್ಲವೆಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮೊದಲೇ ದರ ಕುಸಿತದಿಂದ ಕೆಂಗಟ್ಟಿದ್ದ ನಮಗೆ ಇದೀಗ ನೇರಳೆ ಹಣ್ಣುಗಳಲ್ಲಿ ಮೋತಿ ಹುಳುಗಳು ಕಾಣಿಸಿಕೊಂಡಿರುವು ಮತ್ತಷ್ಟು ನಷ್ಟಕ್ಕೆ ಕಾರಣವಾಗಿದೆ.
ಈಶಪ್ಪ ಕಲಕೇರಿ
ನೇರಳೆ ಬೆಳೆ ಗುತ್ತಿಗೆ ಹಿಡಿದ ರೈತ
ಮಾವು, ನೇರಳೆ, ಪಪ್ಪಾಯ ಸೇರಿ ಇತರ ಹಣ್ಣುಗಳಿಗೆ ಈ ರೀತಿಯಾಗಿ ಹುಳು ಬೀಳುತ್ತಿದೆ. ಅದಕ್ಕಾಗಿ ನೇರಳೆ ಮಿಡಿಗಾಯಿ ಆಗುವ ಸಮಯದಲ್ಲಿ ಮೊಟ್ಟೆ ಇಟ್ಟಿದ್ದು, ಮಳೆ ಬಂದಾಗ ಹುಳು ಹೊರಗೆ ಬರುತ್ತವೆ. ಅದಕ್ಕೆ ಎಕರೆ 8ರಿಂದ 10 ಮೋಹಕ ಬಲೆಯನ್ನು ಬಳಸಿದರೆ ಹುಳು ನಿಯಂತ್ರಿಸಬಹುದು.
ದುರ್ಗಾ ಪ್ರಸಾದ್
ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಗಂಗಾವತಿ